ಬೆಂಗಳೂರು: ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಸಿಬಿಐನ ಹಿರಿಯಾಧಿಕಾರಿಗಳು ಎರಡು ದಿನದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
ಬೆಂಗಳೂರಿನ ಆರ್ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಾರಿ-ಬೆಂಗಳೂರು ಮುಖ್ಯ ರಸ್ತೆ ಗಂಗೇನಹಳ್ಳಿಯಲ್ಲಿ ಬಳಿ ಇರುವ ಸಿಬಿಐ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.
ನಿನ್ನೆ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿದ ಸಿಬಿಐ ತಂಡ ಕೆಲ ಮಹತ್ವದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಡಿಕೆಶಿ ಅಕ್ರಮ ಆಸ್ತಿ ಆರೋಪ ಸಂಬಂಧ ಎಫ್ಐಆರ್ನಲ್ಲಿ ಉಲ್ಲೇಖ ಮಾಡಿದೆ. ಅಧಿಕಾರಕ್ಕೆ ಬಂದ ಡಿಕೆಶಿ, ಯಾವ ರೀತಿ ಆಸ್ತಿ ಮಾಡಿದ್ದಾರೆ, ಆಸ್ತಿ ಮೂಲ ಯಾವುದು ಸೇರಿದಂತೆ ಎಫ್ಐಆರ್ನಲ್ಲಿ ದಾಖಲಾದ ಎಲ್ಲಾ ಅಂಶಗಳಿಗೆ ಡಿ.ಕೆ.ಶಿವಕುಮಾರ್ ಉತ್ತರ ನೀಡಬೇಕಾದದ್ದು ಅನಿವಾರ್ಯವಾಗಿದೆ.
ಒಂದು ವೇಳೆ ತಪ್ಪಿಸಿಕೊಂಡರೆ ಡಿಕೆಶಿ ಭ್ರಷ್ಟಾಚಾರ ಕಾಯ್ದೆಯಡಿ ಬಂಧನವಾಗುವ ಸಾಧ್ಯತೆಯಿದೆ. ವಿಚಾರಣೆಗೆ ಹಾಜರಾಗುವ ಮುನ್ನ ಡಿಕೆಶಿ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಲಿದ್ದಾರೆ. ಇಂದು ಡಿಕೆಶಿ ಮನೆಗೆ ಹಿರಿಯ ವಕೀಲ ಪೊನ್ನಣ್ಣ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಹೈಕೋರ್ಟ್ ಬಲವಂತವಾಗಿ ಕ್ರಮ ಕೈಗೊಳ್ಳದಂತೆ ಸಿಬಿಐಗೆ ಸೂಚಿಸಿದೆ. ಸದ್ಯ ಅಕ್ರಮ ಆಸ್ತಿ ಬಗ್ಗೆ ಸಿಬಿಐ ತನಿಖೆಗೆ ಇಳಿದಿದ್ದು, ಇಂದು ಕಡತಗಳ ಪರಿಶೀಲನೆಯಲ್ಲಿ ತೊಡಗಲಿದ್ದಾರೆ.