ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೂ ನಂಟಿದೆ ಎಂದು ಆರೋಪ ಮಾಡಿದ್ದ ಪ್ರಶಾಂತ್ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿರುವ ಕೋರ್ಟ್, ಸಂಬರಗಿ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.
ಪ್ರಶಾಂತ್ ಸಂಬರಗಿ ತಮ್ಮ ವಿರುದ್ಧ ಅನಗತ್ಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿ ಶಾಸಕ ಜಮೀರ್ ಅಹ್ಮದ್ ಖಾನ್ ನಗರದ 24 ನೇ ಎಸಿಎಂಎಂ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಂದು ಆರೋಪಿ ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್ 499 ಹಾಗೂ 500 ರ ಅಡಿ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಅಲ್ಲದೇ, ಆರೋಪಿ ಪ್ರಶಾಂತ್ ಸಂಬರಗಿ 2021ರ ಜನವರಿ 21 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಜಮೀರ್ ಪರ ವಕೀಲ ಇಸ್ಮಾಯಿಲ್ ಜಬಿವುಲ್ಲಾ ವಾದಿಸಿದ್ದರು.
ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಬಗ್ಗೆ ಬಹಿರಂಗವಾಗಿ ಹಲವು ಹೇಳಿಕೆಗಳನ್ನು ನೀಡಿದ್ದ ಪ್ರಶಾಂತ್ ಸಂಬರಗಿ ಅವರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಹೇಳಿಕೆ ನೀಡಿದ್ದರು. ಈ ಸಂಬಂಧ ಜಮೀರ್ ಅಹಮ್ಮದ್ ಖಾನ್ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ಐಆರ್ ದಾಖಲಿಸದ ಹಿನ್ನೆಲೆ ಎಸಿಎಂಎಂ ಕೋರ್ಟ್ ನಲ್ಲಿ ಪಿಸಿಆರ್ ದಾಖಲಿಸಿದ್ದರು.