ಬೆಂಗಳೂರು: ಬಿಜೆಪಿಗೆ ಅಧಿಕೃತವಾಗಿ ಬಾಹ್ಯ ಬೆಂಬಲ ಘೋಷಣೆ ಮಾಡಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕುಮಾರಪಾರ್ಕ್ನಲ್ಲಿರುವ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಇಂದು ಸಂಜೆ ಸಂಸದೆ ಸುಮಲತಾ ಆಗಮಿಸಿದರು. ಬಿಎಸ್ವೈ ಜೊತೆ ಕೆಲಕಾಲ ರಾಜಕೀಯ ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ಯತ್ನಿಸುತ್ತಿರುವ ಸಮಯದಲ್ಲಿ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿರುವುದರ ಹಿನ್ನೆಲೆಯಲ್ಲಿ ಮಹತ್ವದ ಮಾತುಕತೆ ನಡೆಸಲಾಯಿತು ಎನ್ನಲಾಗಿದೆ.
ಈ ಹಿಂದೆಯೂ ಯಡಿಯೂರಪ್ಪ ಜೊತೆ ಉತ್ತಮ ಒಡನಾಡ ಇರಿಸಿಕೊಂಡಿದ್ದ ಸುಮಲತಾ, ಮೈ ಶುಗರ್ ವಿಚಾರ ಸೇರಿದಂತೆ ಹತ್ತು ಹಲವು ವಿಷಯಗಳಲ್ಲಿ ಚರ್ಚಿಸುತ್ತಾ ಬಂದಿದ್ದರು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ರೀತಿಯ ನೆರವವನ್ನು ಸುಮಲತಾ ಪಡೆದುಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದ ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಕೊಟ್ಟಿತ್ತು. ನಂತರ ಗೆದ್ದ ಬಳಿಕ ಸುಮಲತಾ ಕೂಡ ಎಲ್ಲ ವಿಚಾರದಲ್ಲಿ ಬಿಜೆಪಿಗೆ ಬೆಂಬಲಿಸುತ್ತಲೇ ಬಂದಿದ್ದು, ಇದೀಗ ಬಹಿರಂಗವಾಗಿ ಅಧಿಕೃತವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಿರಿಯ ನಾಯಕ ಯಡಿಯೂರಪ್ಪ ಅವರೊಂದಿಗೆ ರಾಜಕೀಯ ವಿಚಾರದ ಕುರಿತು ಸಮಾಲೋಚನೆ ನಡೆಸಿದರು. ಪಕ್ಷ ಬಲವರ್ಧನೆಗೆ ಸಹಕಾರ ನೀಡಿವ ಭರವಸೆ ನೀಡಿದರು ಎನ್ನಲಾಗಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸುತ್ತಿದ್ದು, ಇಂದೇ ಮಂಡ್ಯಕ್ಕೆ ಸುಮಲತಾ ತೆರಳುತ್ತಿದ್ದಾರೆ. ಅದಕ್ಕೂ ಮುನ್ನ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಶುಕ್ರವಾರವಷ್ಟೇ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಆದ್ರೆ ಸದ್ಯ ನಾನು ಪಕ್ಷೇತರ ಸಂಸದೆಯಾದ್ದರಿಂದ ಬಿಜೆಪಿ ಸೇರುತ್ತಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಿಜೆಪಿಗೆ ಸೇರ್ತಿಲ್ಲ, ಆದರೆ ನನ್ನ ಸಂಪೂರ್ಣ ಬೆಂಬಲ ಬಿಜೆಪಿಗೆ: ಸುಮಲತಾ
ಸುಮಲತಾ ಭೇಟಿ ನಂತರ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಕಾವೇರಿ ನಿವಾಸಕ್ಕೆ ಆಗಮಿಸಿದ ಭಾಸ್ಕರ್ ರಾವ್, ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ರಾಜಕೀಯ ವಿಷಯಗಳ ಕುರಿತು ಚರ್ಚಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್, ಬಿಎಸ್ವೈ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿದ್ದಾರೆ. ಇದೀಗ ಬಿಜೆಪಿ ಸೇರಿರುವ ಅವರು ಬಿಎಸ್ವೈ ಅವರಿಂದ ರಾಜಕೀಯ ಮಾರ್ಗದರ್ಶನ ಪಡೆದುಕೊಂಡರು. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇತ್ತೀಚೆಗಷ್ಟೇ ಆಪ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು.
ಇದನ್ನೂ ಓದಿ: ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧನಾಗಿ ಬಿಜೆಪಿಗೆ ಸೇರಿದ್ದೇನೆ: ಭಾಸ್ಕರ್ ರಾವ್