ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಬ್ಬು ಬೆಳೆಗಾರರ ಧರಣಿ ಸತ್ಯಾಗ್ರಹ 17ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಹೋರಾಟನಿರತರು ತಲೆ ಮೇಲೆ ಕಬ್ಬಿನ ಪಿಂಡಿ ಹೊತ್ತು ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್ಪಿ ದರಕ್ಕಿಂತ ಕಬ್ಬಿನ ಪ್ರತಿ ಟನ್‌ಗೆ ಹೆಚ್ಚುವರಿ 50 ರೂಪಾಯಿ ನೀಡಲು ರಾಜ್ಯ ಸರಕಾರ ಹೊರಡಿಸಿರುವ ಆದೇಶ ಪ್ರತಿಯನ್ನು ಸುಟ್ಟು ಹಾಕಿದರು. ನಂತರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿ ಹಣ ಕೊಡಿಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಆದರೆ ಬೆಳೆಗಾರರ ವಹಿವಾಟಿನಿಂದ ಸರ್ಕಾರಕ್ಕೆ ಬರುವ ತೆರಿಗೆ 5,000 ಕೋಟಿ ರೂ ಹಣದಲ್ಲಿ ಹೆಚ್ಚುವರಿ ದರ ಒದಗಿಸಲಿ ಎಂದು ಆಗ್ರಹಿಸಿದರು.
ಇಳುವರಿ ಪರೀಕ್ಷಿಸಲಿ: ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಣೆ ವೆಚ್ಚವಾಗಿ ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿ ಪ್ರತಿ ಟನ್‌ಗೆ 200 ರಿಂದ 300 ರೂಪಾಯಿ ರೈತರ ಹಣದಲ್ಲಿ ಮುರಿದುಕೊಳ್ಳುತ್ತಿದೆ. ಅದನ್ನು ಕಡಿಮೆ ಮಾಡಲು ಸರಕಾರ ಕ್ರಮ ಕೈಗೊಂಡು ರೈತರ ರಕ್ಷಣೆ ಮಾಡಬೇಕು ಎಂದು ಹೇಳಿದರು.
ರೈತರಿಗೆ ಕೊಡುವುದು ಭಿಕ್ಷೆ ಅಲ್ಲ: ಕಬ್ಬು ಬೆಳೆಯಿಂದ ಬರುವ ಎಥೆನಾಲ್ ಉತ್ಪಾದನೆ ಲಾಭಾಂಶ ಮಾತ್ರ ಯಾಕೆ? ಮೊಲಾಸಿಸ್ ಬಗ್ಯಾಸ್ ಮಡ್ಡಿ, ಸಕ್ಕರೆ ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನು ಕಳೆದು ರೈತರಿಗೆ ಹೆಚ್ಚುವರಿ ಹಣ ನಿಗದಿ ಮಾಡಲಿ. ಎಥೆನಾಲ್‌ನಿಂದ ಹೆಚ್ಚುವರಿ 50 ರೂ. ಕೊಡುತ್ತೇವೆ ಎಂದರೆ ರೈತರಿಗೆ ಕೊಡುವುದು ಭಿಕ್ಷೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ಯ ರಾಜ್ಯದ ಬೆಳೆಗಾರರ ಬೆಂಬಲ: ಈ ತಿಂಗಳ 11ನೇ ತಾರೀಕು ತಮಿಳುನಾಡು, ಕೇರಳ, ಆಂಧ್ರ, ರಾಜ್ಯಗಳ ರೈತ ಮುಖಂಡರು ಬೆಂಗಳೂರಿನ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಲಿದ್ದಾರೆ. ಅನಿವಾರ್ಯತೆ ಬಿದ್ದರೆ ಸಾವಿರಾರು ಸಂಖ್ಯೆ ರೈತರು ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದಾರೆ. ಕಬ್ಬು ಬೆಳೆಗಾರರ ಸಂರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಕಬ್ಬು ಬೆಳೆಗಾರರ ಹೋರಾಟ ತೀವ್ರ: ಎಫ್‌ಆರ್‌ಪಿಗಿಂತ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರೂ. ನೀಡಲು ಆದೇಶ