ಬೆಂಗಳೂರು : ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳಲೇಬೇಕಾದ ಇಕ್ಕಟ್ಟಿನ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಮಹಾರಾಷ್ಟ್ರದಿಂದ ಬರುವವರನ್ನು ತಡೆಯಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ 515 ಕೊರೊನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 483 ಮಹಾರಾಷ್ಟ್ರದಿಂದ ಬಂದವರದ್ದೇ ಆಗಿದೆ. ಅಲ್ಲಿಗೆ 32 ಅಷ್ಟೇ ನಮ್ಮಲ್ಲಿ ಬಂದಂತಾಗಿದೆ. ಹೊರರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಬಯಸಿದಲ್ಲಿ ಅವರನ್ನು ಎಲ್ಲಾ ರಾಜ್ಯಗಳು ಕರೆಸಿಕೊಳ್ಳಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹಾಗಾಗಿ ನಾವು ಆದೇಶವನ್ನು ಪಾಲಿಸಲೇಬೇಕು, ವಲಸೆ ಕಾರ್ಮಿಕರಿಂದ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ನಿಯಂತ್ರಣ ಮಾಡಲೇಬೇಕು, ಆ ನಿಟ್ಟಿನಲ್ಲಿ ನಾವು ಅಗತ್ಯ ಕ್ರಮ ವಹಿಸಲಿದ್ದೇವೆ ಎಂದರು.
ಮಹಾರಾಷ್ಟ್ರದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಿ ತಪಾಸಣೆ ಮಾಡಲಾಗುತ್ತದೆ. ಬಸ್, ರೈಲು ಮೂಲಕ ದೊಡ್ಡ ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ. ಅಷ್ಟೊಂದು ಜನರನ್ನು ಕ್ವಾರಂಟೈನ್ ಮಾಡುವುದು ಕಷ್ಟ. ಪ್ರತಿ ದಿನವೂ ಜನ ಜಾಸ್ತಿ ಆಗುತ್ತಿದ್ದಾರೆ. ಹಾಗಾಗಿ ನಾವು ಬಹಳ ಇಕ್ಕಟ್ಟಿನ ಸ್ಥಿತಿಯಲ್ಲಿ ಇದ್ದೇವೆ. ಒಂದು ಕಡೆ ಸುಪ್ರೀಂಕೋರ್ಟ್ ಆದೇಶಕ್ಕೆ ತಲೆ ಬಾಗಲೇಬೇಕು, ಅದೇ ರೀತಿ ಮತ್ತೊಂದು ಕಡೆ ಕೊರೊನಾ ನಿಯಂತ್ರಣ ಮಾಡಬೇಕು. ಹಾಗಾಗಿ ಸ್ವಲ್ಪ ಇಕ್ಕಟ್ಡಿನಲ್ಲಿದ್ದೇವೆ. ಆದಷ್ಟು ಬೇಗ ಇದು ಸುಧಾರಣೆಯಾಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.