ಬೆಂಗಳೂರು: ಕೆಲ ಲ್ಯಾಬ್ಗಳ ವರದಿಯನ್ನು ಎರಡೆರಡು ಬಾರಿ ಬಂದಿದ್ದರಿಂದ ಸಿಎಂಗೆ ತಪ್ಪು ಮಾಹಿತಿ ಹೋಗಿದೆ. ಈ ಪರಿಣಾಮ ನಿನ್ನೆ ಕೊರೊನಾ ಅಂಕಿ ಅಂಶ ನೀಡುವ ವಿಚಾರದಲ್ಲಿ ಲೋಪವಾಗಿತ್ತು. ಇನ್ಮುಂದೆ ಆ ರೀತಿ ಆಗಲ್ಲ. ಹೆಲ್ತ್ ಬುಲೆಟಿನ್ನಲ್ಲಿ ಬರುವ ಮಾಹಿತಿಯೇ ಅಧಿಕೃತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೊರೊನಾ ತಪ್ಪು ಮಾಹಿತಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಿಯೋಗಕ್ಕೆ ಕೊರೊನಾ ಮಾಹಿತಿ ನೀಡುವಾಗ ಸಿಎಂ ಬಿ.ಎಸ್.ಯಡಿಯೂರಪ್ಪ 410 ಕೊರೊನಾ ಪಾಸಿಟಿವ್ ವರದಿಯಾಗಿವೆ ಎಂದಿದ್ದರು. ಆದರೆ ಅಧಿಕಾರಿಗಳು 401 ಎಂದು ನೀಡಿದ್ದ ಮಾಹಿತಿಯನ್ನು ಸಿಎಂ 410 ಎಂದಿದ್ದರು. ಆದರೆ 401 ಸಂಖ್ಯೆ ಕೂಡ ಲೋಪದೋಷದಿಂದ ಕೂಡಿದೆ. ಕೆಲ ಲ್ಯಾಬ್ಗಳ ವರದಿ ಎರಡೆರಡು ಬಾರಿ ಕಲೆಹಾಕಿ ಅಧಿಕಾರಗಳು ಸಿಎಂಗೆ ನೀಡಿದ್ದರು. ಹೀಗಾಗಿ ಆ ಯೆಡವಟ್ಟಾಯಿತು ಎಂದು ನಿನ್ನೆಯ ಗೊಂದಲಕ್ಕೆ ಸ್ಪಷ್ಟೀಕರಣ ನೀಡಿದರು.
ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಿದ್ದೇವೆ. ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇನೆ. ಎಲ್ಲರನ್ನೂ ಕರೆಸಿ ಹೇಳಿದ್ದೇನೆ. ಸುಮಾರು 17 ಕಡೆ ಇರುವ ಲ್ಯಾಬ್ಗಳಿಂದ ಮಾಹಿತಿ ತರಿಸಿಕೊಳ್ಳಲಾಗುತ್ತದೆ. ಅದರ ಜೊತೆ ರೋಗಿಗಳ ಹಿನ್ನೆಲೆಯನ್ನು ಸಂಗ್ರಹಿಸಿ ಕೊಡಬೇಕಿದೆ. ಹಾಗಾಗಿ ಹೆಲ್ತ್ ಬುಲೆಟಿನ್ ಮೂಲಕವೇ ಇನ್ಮುಂದೆ ಮಾಹಿತಿ ನೀಡುತ್ತೇವೆ. ಅದೇ ಮಾಹಿತಿ ಅಧಿಕೃತ ಮಾಹಿತಿ ಎಂದರು.
ಇನ್ನುಂದೆ ಹೀಗಾಗಲ್ಲ. ಅಂಕಿ ಅಂಶಗಳಲ್ಲಿ ತಪ್ಪುಗಳನ್ನು ಕಂಡು ಹಿಡಿಯಲು ಹೋಗಬೇಡಿ. ಇನ್ನೇನಾದರೂ ಗುರುತರವಾದ ತಪ್ಪುಗಳಿದ್ದರೆ ಹೇಳಿ ತಿದ್ದಿಕೊಳ್ಳುತ್ತೇವೆ ಎಂದು ಸಚಿವರು ಲೋಪವನ್ನು ಒಪ್ಪಿಕೊಂಡು ಎಚ್ಚರಿಕೆಯಿಂದ ಇರುವುದಾಗಿ ಹೇಳಿದರು.