ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಸವಿತಾ ಸಮಾಜ, ಮಡಿವಾಳ ಸಮಾಜ ಹಾಗೂ ವಿಶ್ವಕರ್ಮ ಸಮಾಜದ ವಿವಿಧ ಮುಖಂಡರುಗಳು ಗುರುವಾರ ಭೇಟಿ ನೀಡಿ ತಮ್ಮ ಪರ ಧ್ವನಿ ಎತ್ತಿದಕ್ಕೆ ಧನ್ಯವಾದ ತಿಳಿಸಿದರು.
ಇಂದು ಬೆಳಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ನಾಯಕರು ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿದ್ದಾರೆ. ರಾಜ್ಯ ಸರ್ಕಾರದಿಂದ ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ದ ದನಿಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ವಿದ್ಯುತ್ ಮಗ್ಗ ನೇಕಾರರು, ಗಾಣಿಗರು, ಕುಂಬಾರ, ಕಮ್ಮಾರ, ಮೇದಾರರು, ದರ್ಜಿಗಳು, ವಿಶ್ವಕರ್ಮ, ಅಲೆಮಾರಿಗಳು, ಬುಡಕಟ್ಟು ಸಮುದಾಯ, ಉಪ್ಪಾರರು, ಅರ್ಚಕರು, ಮಂಗಳವಾದ್ಯ ನುಡಿಸುವವರು, ಕಲಾವಿದರು, ಛಾಯಾಗ್ರಾಹಕರನ್ನು ಕೊರೊನಾ ಪ್ಯಾಕೇಜ್ನಲ್ಲಿ ಸೇರಿಸದಿರುವ ಬಗ್ಗೆ ತಮ್ಮ ಹೋರಾಟ ಅತ್ಯಂತ ಪ್ರಮುಖವಾಗಿತ್ತು ಎಂದು ತಿಳಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಸಿ ವೇಣುಗೋಪಾಲ್, ಸವಿತಾ ಸಮಾಜದ ಮುಖಂಡರಾದ ಎಂಎಲ್ಸಿ ವೇಣುಗೋಪಾಲ್, ಜಿ. ಕೃಷ್ಣಮೂರ್ತಿ, ಶ್ರೀಕಾಂತ್, ಶಿವಕುಮಾರ್, ವೀರಪ್ಪ, ಮಡಿವಾಳ ಸಮಾಜದ ಮುಖಂಡರಾದ ನಂಜಪ್ಪ, ಜಿ.ಡಿ. ಗೋಪಾಲ್, ವಿಶ್ವಕರ್ಮ ಸಮಾಜದ ಮುಖಂಡರಾದ ಸತ್ಯವತಿ, ಬಾಬು ಪತ್ತಾರ್, ಜಗದೀಶ್ ಮತ್ತಿತರರು ಹಾಜರಿದ್ದರು.
ಸವಿತಾ ಸಮಾಜದ ಕ್ಷೌರಿಕರು ಮಾತ್ರವಲ್ಲದೇ ವಾಲಗ ಊದುವವರು, ಡೋಲು ಬಾರಿಸುವವರು ಮತ್ತಿತರರಿಗೂ ಈ ಪರಿಹಾರ ವಿಸ್ತರಿಸಲು ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತರುವಂತೆ ಮುಖಂಡರು ಶಿವಕುಮಾರ್ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.