ಬೆಂಗಳೂರು: ಸರ್ಕಾರಿ ನೌಕರರ ಕುಟುಂಬಸ್ಥರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಿಲ್ಲ ಎಂಬ ರಾಜ್ಯ ಸರ್ಕಾರದ ನಿಯಮವನ್ನು ಕೈ ಬಿಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಸರ್ಕಾರಿ ನೌಕರರ ಪತಿ, ಪತ್ನಿ ರಾಜಕೀಯ ಪಕ್ಷದ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಂವಿಧಾನದ 19ನೇ ಅನುಚ್ಚೇದದ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಈ ನಿಯಮ ಕೈ ಬಿಡಬೇಕೆಂದು ಮನವಿ ಮಾಡಿದ್ದಾರೆ.ಅಲ್ಲದೇ ಸರ್ಕಾರಿ ನೌಕರನು ತನ್ನ ಹತ್ತಿರದ ಸಂಬಂಧಿಗೆ ಸರ್ಕಾರ ಪೋಷಿಸಿಕೊಂಡು ಬರುತ್ತಿರುವ ಕಂಪನಿಯಲ್ಲಿ ಉದ್ಯೋಗ ಕೊಡಿಸುವಂತಿಲ್ಲ ಎಂಬ ನಿಯಮಮೂ ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ಷೇಪಿಸಲಾಗಿದೆ.
ಸರ್ಕಾರಿ ನೌಕರರು ಕ್ರೀಡಾ ಸಂಸ್ಥೆಗಳಲ್ಲಿ ಅಧಿಕಾರ ಹೊಂದದಂತೆ, ಸಂಘ ಸಂಸ್ಥೆಗಳನ್ನು ಸ್ಥಾಪಿಸದಂತೆ ಹಾಕಿರುವ ನಿಯಮ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಸರ್ಕಾರಿ ನೌಕರನು ಖಾಸಗಿ ಕೆಲಸಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ 21 ದಿನಗಳೊಳಗೆ ಅನುಮತಿ ನೀಡದಿದ್ದರೆ ಅದನ್ನು ಅನುಮತಿ ದೊರೆತಿದೆ ಎಂದು ಪರಿಗಣಿಸಬೇಕು. ಅಲ್ಲದೇ ಮುಷ್ಕರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮವನ್ನು ಅನುಮತಿ ಪಡೆದ ಮುಷ್ಕರದಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರಿ ನೌಕರರು ತಮ್ಮ ಆಪ್ತರಿಂದ ಪಡೆಯುವ ಉಡುಗೊರೆಯ ಮೌಲ್ಯ ಒಂದು ತಿಂಗಳ ಸಂಬಳಕ್ಕಿಂತ ಹೆಚ್ಚಿರಬಾರದು ಎನ್ನುವುದನ್ನು ಕನಿಷ್ಠ ಎರಡು ತಿಂಗಳ ಸಂಬಳಕ್ಕಿಂತ ಹೆಚ್ಚಿರಬಾರದು ಎಂದು ಪರಿಷ್ಕರಿಸಬೇಕು. ಸರ್ಕಾರಿ ನೌಕರನು ಕುಟುಂಬದ ಆದಾಯದ ಮೂಲಕ ಜಮೀನು ಹಾಗೂ ಆಸ್ತಿ ಖರೀದಿಸುವಾಗ ಸರ್ಕಾರದ ಅನುಮತಿ ಕಡ್ಡಾಯ ಮಾಡಿರುವುದು ಹಾಗೂ ಸರ್ಕಾರಿ ನೌಕರ ಉನ್ನತ ಶಿಕ್ಷಣ ಪಡೆಯಲು ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ.