ಬೆಂಗಳೂರು: 2020-21ರ ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿನಲ್ಲಿ ಉಪನಗರ ರೈಲ್ವೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದು, 148.17 ಕಿ.ಮೀ ವಿಸ್ತೀರ್ಣದ 4 ಕಾರಿಡಾರ್ ಮೂಲಕ ಈ ನೆಟ್ವರ್ಕ್ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರಿಡಾರ್ ಒಂದು ಕೆಂಗೇರಿಯಿಂದ ವೈಟ್‌ಫೀಲ್ಡ್, ಕಾರಿಡಾರ್ ಎರಡು ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಯಶವಂತಪುರ ಮೂಲಕ ದೇವನಹಳ್ಳಿಗೆ, (ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುವುದು), ಕಾರಿಡಾರ್ ಮೂರು ಚಿಕ್ಕಬಾಣಾವಾರದಿಂದ ಬೈಯಪ್ಪನಹಳ್ಳಿ, ನಾಲ್ಕನೆಯದಾಗಿ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.
ಈ ಯೋಜನೆಯ ಅಂದಾಜು ವೆಚ್ಚ ₹18,600 ಕೋಟಿ ಹಾಗೂ 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ 20ರಷ್ಟು ವೆಚ್ಚವನ್ನು ಬರಿಸಲಿದ್ದು, ಉಳಿದ ಶೇಕಡಾ 60ರಷ್ಟು ಅನುದಾನವನ್ನು ಸಾಂಸ್ಥಿಕ ಸಾಲವಾಗಿ ಪಡೆಯಲಾಗುತ್ತದೆ. ಈ ಯೋಜನೆ ಅಡಿ ಬೆಂಗಳೂರಿನ 57 ಪ್ರಮುಖ ಸ್ಥಳಗಳಲ್ಲಿ ಉಪನಗರ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಹವಾನಿಯಂತ್ರಿತ ರೈಲು ಬೋಗಿಗಳನ್ನು ಅಳವಡಿಸುವ ಯೋಜನೆ ಇದಾಗಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ಉಪನಗರ ರೈಲ್ವೆ ವ್ಯವಸ್ಥೆಯು ಬೆಳಗ್ಗೆ 5ರಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿದ್ದು, ಭಾರತೀಯ ರೈಲ್ವೆ ಮತ್ತು ನಮ್ಮ ಮೆಟ್ರೋ (ಬಿಎಂಆರ್ಸಿಎಲ್) ನಿಲ್ದಾಣಗಳೊಂದಿಗೆ ಒಳಸಂಪರ್ಕವನ್ನು ಹೊಂದಿರುತ್ತದೆ. ಬೆಂಗಳೂರಿಗೆ ಮಾದರಿ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ನಗರದ ಜನದಟ್ಟಣೆ ಕಡಿಮೆಯಾಗಲಿದ್ದು, ನಿಗದಿತ ಸಮಯದೊಳಗೆ ವೇಗವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಗೊಳಿಸಲು ಸಹಾಯವಾಗುತ್ತದೆ.