ಬೆಂಗಳೂರು: ಯುಜಿ ಸಿಇಟಿ ಮಾಪ್ ಅಪ್ ಸುತ್ತಿನಲ್ಲಿ ಇಂಜಿನಿಯರಿಂಗ್ ಸೀಟುಗಳನ್ನು ಪಡೆದಿದ್ದವರ ಪೈಕಿ ಕೆಲವು ವಿದ್ಯಾರ್ಥಿಗಳು ಸೀಟುಗಳನ್ನು ಹಿಂಪಡೆಯುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕಾರಿಗಳನ್ನು ಒತ್ತಾಯಿಸಿ ಮುಷ್ಕರ ನಡೆಸಿದರು.
ಕೊನೆಯ ಸುತ್ತಿನಲ್ಲಿ ಇಂಜಿನಿಯರಿಂಗ್ ಸೀಟು ಪಡೆದಿದ್ದ ವಿದ್ಯಾರ್ಥಿಗಳು ಶುಲ್ಕ ಪಾವತಿಗೆ ಸೋಮವಾರ ಕೊನೆಯ ದಿನವಾಗಿತ್ತು. ಹೀಗಾಗಿ, ಶುಲ್ಕ ಪಾವತಿಸದೆ ಸೀಟುಗಳನ್ನು ಹಿಂಪಡೆಯುವಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದರು. ಬೆಳಗ್ಗೆಯಿಂದಲೇ ಕೆಇಎ ಕಚೇರಿಗೆ ಆಗಮಿಸಿದ ಪೋಷಕರು, ನಾವು ಇಂಜಿನಿಯರಿಂಗ್ ಬದಲು ಆಯುಷ್, ಬಿಎಸ್ಸಿ, ಬಿಕಾಂ ಅಥವಾ ಬೇರೆ ಇನ್ನಿತರ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಇಚ್ಛಿಸಿದ್ದೇವೆ. ಆದ್ದರಿಂದ ಸೀಟುಗಳನ್ನು ಹಿಂಪಡೆಯುವಂತೆ ಮನವಿ ಮಾಡಿದರು.
ಓದಿ: ಭಾರತದಲ್ಲಿ 6 ಮಂದಿಗೆ ರೂಪಾಂತರಗೊಂಡ ಕೊರೊನಾ ವೈರಸ್: ಕರ್ನಾಟಕದ ಮೂವರಲ್ಲಿ ಸೋಂಕು
ಮನವಿ ಸ್ವೀಕರಿಸಿದ ಅಧಿಕಾರಿಗಳು, ನಿಯಮಗಳ ಪ್ರಕಾರ ಕೊನೆಯ ಸುತ್ತಿನಲ್ಲಿ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಹಿಂತಿರುಗಿಸುವ ಅವಕಾಶವಿಲ್ಲ. ಇದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಸರ್ಕಾರ ನಿರ್ಣಯ ಕೈಗೊಂಡ ಬಳಿಕ ತಮಗೆ ತಿಳಿಸಲಾಗುತ್ತದೆ ಎಂದು ಭರವಸೆ ನೀಡಿದರು. ಆದರೂ ಅಧಿಕಾರಿಗಳ ಮಾತಿಗೆ ಒಮ್ಮತ ಸೂಚಿಸದ ಪೋಷಕರು, ಕೂಡಲೇ ಸೀಟುಗಳನ್ನು ವಾಪಸ್ ಪಡೆದು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.
ಈ ನಡುವೆ ಸೀಟುಗಳನ್ನು ರದ್ದು ಮಾಡಬೇಕೆಂದರೆ ಶುಲ್ಕ 1:5 ರಷ್ಟು ದಂಡ ಕಟ್ಟಬೇಕು. ಅಂದರೆ 25 ಸಾವಿರ ಶುಲ್ಕ ಇದ್ದರೆ ಅದಕ್ಕೆ 1:5 ಅಂದ್ರೆ 1 ಲಕ್ಷದ 50 ಸಾವಿರ ಕಟ್ಟಬೇಕು. ಈ ವಿಚಾರ ಕೇಳಿ ಕಂಗಾಲಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.