ಬೆಂಗಳೂರು: ಇಂದು ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಸಂಬಂಧಿಸಿದಂತೆ ನೀಟ್ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ.
ದೇಶಾದ್ಯಂತ 15 ಲಕ್ಷದ 97 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಕೋವಿಡ್ ಹಿನ್ನೆಲೆ ಈ ಹಿಂದೆ ಮೂರು ಬಾರಿ ಪರೀಕ್ಷೆ ಮುಂದೂಡಲಾಗಿತ್ತು. ದೇಶದೆಲ್ಲೆಡೆ ಕೊರೊನಾ ಸೋಂಕು ಆವರಿಸಿದ ಹಿನ್ನೆಲೆ ಪರೀಕ್ಷೆ ಬೇಡ ಅಂತಾ ಪ್ರತಿಪಕ್ಷದವರು ಪ್ರತಿಭಟನೆ ನಡೆಸಿದ್ದರು. ಈ ಹಿಂದೆ 2,456 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ನಿಗದಿಯಾಗಿದ್ದು, ಇದೀಗ 3,843 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಕೋಣೆಯಲ್ಲಿ ಕೇವಲ 12 ವಿದ್ಯಾರ್ಥಿಗಳು ಮಾತ್ರ ಕುಳಿತು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ರಾಜ್ಯದಲ್ಲಿ ಸುಮಾರು 298 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 1,19,587 ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕೊರೊನಾ ಹಿನ್ನೆಲೆ ಬೆಳಗ್ಗೆ 11 ಗಂಟೆಯಿಂದಲೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಹೀಗಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೈಗೆ ಹ್ಯಾಂಡ್ ಗ್ಲೌಸ್, ಫೇಸ್ ಮಾಸ್ಕ್, ಸ್ಯಾನಿಟೈಸರ್ನೊಂದಿಗೆ ಆಗಮಿಸಿದ್ದಾರೆ.
ಮಧ್ಯಾಹ್ನ 2 ರಿಂದ 5 ರವರೆಗೆ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ದೂರದ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ನಿನ್ನೆಯೇ ಬಹುತೇಕ ವಿದ್ಯಾರ್ಥಿಗಳು ಬೆಂಗಳೂರು ತಲುಪಿದ್ದರು. ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ಇಲ್ಲ. ಹೀಗಾಗಿ ಸಮೀಪದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.