ಬೆಂಗಳೂರು: ಟೀಚರ್ ಹಾಗೂ ಪೋಷಕರು ಬೈದಿದಕ್ಕೆ ಕಳೆದ ವಾರ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದ ದುರ್ಘಟನೆ ಮರುಕಳಿಸಿದೆ.
ಶಾಲಾ ಶಿಕ್ಷಕಿ ಬೈದಿದಕ್ಕೆ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ 10ನೇ ತರಗತಿ ವಿದ್ಯಾರ್ಥಿನಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಣಸವಾಡಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಮೃತ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಶಾಲೆಯಲ್ಲಿ ಓದುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಎಲ್ಲ ವಿದ್ಯಾರ್ಥಿಗಳ ಮುಂದೆ ವಿದ್ಯಾರ್ಥಿನಿಗೆ ಬೈದಿದ್ದರಂತೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಗೆ ಬಂದು ಸಂಜೆ ವೇಳೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ಧಾರೆ.
ಸಾವಿಗೆ ಶರಣಾಗುವ ಮುನ್ನ ವಿದ್ಯಾರ್ಥಿನಿ ಡೆತ್ನೋಟ್ ಬರೆದಿದ್ದಾಳೆ ಎಂದು ತಿಳಿದು ಬಂದಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ.. ಶಾಲೆಯಲ್ಲಿ ನಡೆದ ಘಟನೆ ಮರೆಯಲು ಸಾಧ್ಯವಾಗುತ್ತಿಲ್ಲ.. ಐ ಲವ್ ಯು ಮಾಮ್ ಅಂಡ್ ಡ್ಯಾಡ್ ಎಂದು ಡೆತ್ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕಳೆದ ವಾರ ಟೀಚರ್ ಹಾಗೂ ಪೋಷಕರು ಬೈದಿದಕ್ಕೆ ಸಂಪಿಗೆಹಳ್ಳಿ ಹಾಗೂ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಶಾಲಾ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅಂತಹದೇ ಮತ್ತೊಂದು ದುರ್ಘಟನೆ ನಡೆದಿದೆ.
ಓದಿ: ಜೀಪಿನಡಿ ಸಿಲುಕಿ ಅಪ್ಪನ ಸಾವು-ಬದುಕಿನ ಹೋರಾಟ: ಪ್ರಾಣ ಉಳಿಸಿದ ಮಗಳಿಗೆ 'ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ'