ಬೆಂಗಳೂರು: ಅಪಾರ್ಟ್ಮೆಂಟ್ವೊಂದರ 14ನೇ ಮಹಡಿಯಿಂದ ಕೆಳಗೆ ಹಾರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಿಗೆಹಳ್ಳಿಯಲ್ಲಿ ನಿನ್ನೆ(ಮಂಗಳವಾರ) ಸಂಜೆ ನಡೆದಿದೆ. ನೂರ್ ನಗರ ಲೇಔಟ್ ನಿವಾಸಿ ಮೋಹಿನ್ ಖಾನ್(15) ಮೃತ ದುರ್ದೈವಿ. ಈತ ಮೊಹಮ್ಮದ್ ನೂರ್ ಮತ್ತು ನೋಹೇರಾ ದಂಪತಿ ಪುತ್ರ.
ಹೆಗಡೆ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕಾಪಿ ಮಾಡುತ್ತಿದ್ದನಂತೆ. ಇದನ್ನು ಗಮನಿಸಿದ ಶಿಕ್ಷಕರು ತರಗತಿಯಿಂದ ಹೊರಹಾಕಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿ ಯಾರಿಗೂ ತಿಳಿಸದೆ ಏಕಾಏಕಿ ಮನೆ ಕಡೆ ಬಂದಿದ್ದಾನೆ. ಅದೇ ದಿನ ಸಂಜೆ 5 ಗಂಟೆ ಸುಮಾರಿಗೆ ಮನೆ ಸಮೀಪದಲ್ಲಿರುವ ಅಪಾರ್ಟ್‌ಮೆಂಟ್‌ನ ಮೇಲೆ ಹೋಗಿ ಜಿಗಿಯಲು ಯತ್ನಿಸಿದ್ದಾನೆ. ಆಗ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಆತನ ಕೈ ಹಿಡಿದುಕೊಂಡಿದ್ದಾರೆ. ಆದರೆ, ಬಾಲಕ ಅವರ ಕೈ ಬಿಡಿಸಿಕೊಂಡು ಕೆಳಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ಈತನ ಸ್ನೇಹಿತನೊಬ್ಬ ವಾಸವಾಗಿದ್ದು, ಆತನ ಭೇಟಿಗೆ ಆಗಾಗ ಬರುತ್ತಿದ್ದನಂತೆ. ಹೀಗಾಗಿ ಭದ್ರತಾ ಸಿಬ್ಬಂದಿ ಕೂಡ ಪರಿಚಯಸ್ಥ ಬಾಲಕ ಎಂಬ ಕಾರಣಕ್ಕೆ ಒಳಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಶಾಲೆ ಮತ್ತು ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿಯ ಲೋಪದಿಂದಲೇ ಘಟನೆ ನಡೆದಿದೆ ಎನ್ನುವುದು ಪೋಷಕರ ಆರೋಪ.
ಇದನ್ನೂ ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ