ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಾಮಾನ್ಯವಾಗಿದೆ. ಯಾರಾದರೂ ಪಾರ್ಶ್ವವಾಯುವಿಗೆ ತುತ್ತಾದರೆ ಪ್ರತಿ ಸೆಕೆಂಡ್ ಕೂಡ ಬಹಳ ಮಹತ್ವದಾಗಿರುತ್ತದೆ. ಸೂಕ್ತ ಸಮಯದಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಿಂದ ಚಿಕಿತ್ಸೆ ದೊರಕಿದರೆ ಅಪಾಯದಿಂದ ಪಾರಾಗಬಹುದು ಎಂದು ಆಸ್ಪತ್ರೆಯ ಮುಖ್ಯ ನ್ಯೂರೋಸರ್ಜನ್ ಹಾಗೂ ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಚ್.ವಿ ಮಧುಸೂದನ್ ತಿಳಿಸಿದರು.
ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಪ್ರತಿದಿನ 1ರಿಂದ 6 ಮಂದಿ ಪಾರ್ಶ್ವವಾಯುಗೆ ತುತ್ತಾಗುತ್ತಿದ್ದಾರೆ. ಮೆದುಳಿನ ಪಾರ್ಶ್ವವಾಯು ಸಾವಿಗೆ ದೂಡುವ ಎರಡನೇ ಪ್ರಮುಖ ಕಾರಣವಾಗಿದೆ ಮತ್ತು ಅಂಗವೈಕಲ್ಯದ ಮೂರನೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 18 ಲಕ್ಷ ಜನರು ಸ್ಟ್ರೋಕ್ಗೆ ಒಳಗಾಗುತ್ತಾರೆ. ಸ್ಟ್ರೋಕ್ ಬಂದಾಗ ತಕ್ಷಣ ಗುರುತಿಸಿ ಆಸ್ಪತ್ರೆಗೆ ಕರೆದೊಯ್ಯುಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಿದರೆ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಹೇಳಿದರು.
ಬಲಗೈ ಸ್ವಾಧೀನ ಕಳೆದುಕೊಂಡಿದ್ದ 102 ವರ್ಷದ ರಾಮಸ್ವಾಮಿ ಎಂಬುವರನ್ನು ಮೂರು ದಿನಗಳ ಹಿಂದೆ ದಾಖಲಿಸಲಾಗಿತ್ತು. ಅರ್ಧ ಗಂಟೆಯೊಳಗಡೆ ಶೇಕಡಾ 50ರಷ್ಟು ತಮ್ಮ ಕೈಯನ್ನು ಎತ್ತುವಷ್ಟು ಸಮರ್ಥರಾದರು. ಹಾಗೆಯೇ, ಒಂದು ಗಂಟೆಯೊಳಗಡೆ ಶೇಕಡಾ 90ರಷ್ಟು ತಮ್ಮ ಕೈಯನ್ನು ಎತ್ತಿ ಅಪಾಯದಿಂದ ಪಾರಾಗಿದ್ದಾರೆ. ಈಗ ಹಾಡನ್ನು ಹಾಡುವಷ್ಟು ಅವರು ಗುಣಮುಖರಾಗಿದ್ದಾರೆ ಎಂದರು.
ಇದನ್ನೂ ಓದಿ: ದೀರ್ಘಕಾಲದ ಕೋವಿಡ್ನಿಂದ ಹೃದಯಾಘಾತ, ಪಾರ್ಶ್ವವಾಯು ಹೆಚ್ಚಳ: ಅಧ್ಯಯನ ವರದಿ
ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವ ಸ್ಟ್ರೋಕ್ ದಿನವನ್ನು ಆಚರಿಸಲಾಗುತ್ತದೆ. ಹೊಸದೊಂದು ವಿಷಯದ ಮೂಲಕ ಪ್ರತಿ ವರ್ಷ ಪಾರ್ಶ್ವವಾಯು ಕುರಿತು ಜನರಿಗೆ ಅರಿವು ಮೂಡಿಸುತ್ತಿರುವ ವಲ್ಡ್ ಸ್ಟ್ರೋಕ್ ಆರ್ಗನೈಸೇಶನ್ (ಡಬ್ಲ್ಯುಎಸ್ಒ) ಈ ಬಾರಿ 'ಅಮೂಲ್ಯ ಸಮಯ' ಥೀಮ್ನೊಂದಿಗೆ ವಿಶ್ವ ಪಾರ್ಶ್ವವಾಯು ದಿನದ ಜಾಗೃತಿಯನ್ನು ಉತ್ತೇಜಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಪ್ರತಿ ವರ್ಷ 35 ಸಾವಿರ ಮಂದಿ ಪಾರ್ಶ್ವವಾಯುಗೆ ಬಲಿ: ನಿಮ್ಹಾನ್ಸ್ ನಿರ್ದೇಶಕ ಡಾ.ಗುರುರಾಜ್
ನ್ಯೂರಾಲಜಿ ಸೀನಿಯರ್ ಕನ್ಸಲ್ಟೆಂಟ್ ಡಾ. ರಾಜೇಶ್ ಕೆ.ಎನ್ ಮಾತನಾಡಿ, ಮೆದುಳಿನ ಪಾರ್ಶ್ವವಾಯು ಸಾವಿಗೆ ದೂಡುವ ಎರಡನೇ ಪ್ರಮುಖ ಕಾರಣವಾಗಿದೆ ಮತ್ತು ಅಂಗವೈಕಲ್ಯದ ಮೂರನೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 18 ಲಕ್ಷ ಜನರು ಸ್ಟ್ರೋಕ್ಗೆ ಒಳಗಾಗುತ್ತಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಿದರೆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಬಹುದು. ಟ್ರಸ್ಟ್ ವೆಲ್ ಸಂಸ್ಥೆಯು ಅರ್ಹವಾದ ನರ ಶಸ್ತ್ರ ಚಿಕಿತ್ಸಕರು, ನ್ಯೂರೋ ಇಂಟರ್ವೆನ್ಷನಿಸ್ಟ್ಗಳು, ನ್ಯೂರೋ-ಅನಸ್ಥೆಟಿಸ್ಟ್ ಗಳು, ಕ್ರಿಟಿಕಲ್ ಕೇರ್ ತಜ್ಞರ ತಂಡವನ್ನು ಹೊಂದಿದೆ. ಜೊತೆಗೆ ಮೆದುಳು, ಬೆನ್ನು ಮೂಳೆಯ ಅಘಾತಕಾರಿ ಗಾಯ, ನರರೋಗಶಾಸ್ತ್ರ ನ್ಯೂರೋ ಸರ್ಜರಿ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಮೀಸಲಾದ ಕೇಂದ್ರಗಳನ್ನು ಹೊಂದಿದೆ ಎಂದರು.
ಇದನ್ನೂ ಓದಿ: ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ!
ಇದೇ ವೇಳೆ ಪಾರ್ಶ್ವವಾಯುನಿಂದ ಗುಣಮುಖರಾದ 102 ವರ್ಷದ ರಾಮಸ್ವಾಮಿ ಅವರು ಮಾತನಾಡಿ, 'ನನ್ನ ಮೊಮ್ಮಗ ಲಂಡನ್ನಲ್ಲಿ ವೈದ್ಯರಾಗಿದ್ದಾರೆ. ಅವರು ಕರೆ ಮಾಡಿ ಟ್ರಸ್ಟ್ ವೆಲ್ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದರಿಂದ ತಕ್ಷಣ ಇಲ್ಲಿಗೆ ಬಂದು ಚಿಕಿತ್ಸೆ ಪಡೆದಿದ್ದೇನೆ. ಭಗವಂತನ ಆಶೀರ್ವಾದದಿಂದ ಈಗ ಚೆನ್ನಾಗಿದ್ದೇನೆ' ಎಂದಿದ್ದಾರೆ.
ಸ್ಟ್ರೋಕ್ ಜಾಗೃತಿ ವಾಕಥಾನ್ : ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೆ.ಸಿ ರಸ್ತೆಯಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಿಂದ ಶನಿವಾರ 'ಸ್ಟ್ರೋಕ್ ಜಾಗೃತಿ ವಾಕಥಾನ್' ಆಯೋಜಿಸಲಾಗಿತ್ತು. ಈ ವಾಕಥಾನ್ಗೆ ಪಾರ್ಶ್ವವಾಯುವಿಗೆ ತುತ್ತಾಗಿ ಯಶಸ್ವಿ ಚಿಕಿತ್ಸೆ ಪಡೆದುಕೊಂಡಿರುವ 102 ವರ್ಷದ ಹಿರಿಯರು ಚಾಲನೆ ನೀಡಿದರು.