ಬೆಂಗಳೂರು : ಮಲ್ಲತ್ತಳ್ಳಿಯ ಕೆರೆಯಲ್ಲಿ ಬಯಲು ರಂಗಮಂದಿರ, ಶಿವನ ಪ್ರತಿಮೆ ಮತ್ತು ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡುತ್ತಿರುವ ಆರೋಪ ಸಂಬಂಧ ತೋಟಗಾರಿಕಾ ಸಚಿವ ಮುನಿರತ್ನ ನಾಯ್ಡು ಅವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಕೆರೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿ ತೆರವುಗೊಳಿಸುವಂತೆ ಕೋರಿ ವಕೀಲೆ ಗೀತಾ ಮಿಶ್ರಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ.ಬಿ.ವೀರಪ್ಪ ಮತ್ತು ನ್ಯಾ.ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಪ್ರತಿವಾದಿಗಳಾದ ಸಚಿವ ಮುನಿರತ್ನ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋವಿಂದರಾಜು ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ನೆರವಿನೊಂದಿಗೆ ರಾಜರಾಜೇಶ್ವರಿ ನಗರದ ಬಿಜೆಪಿ ಅಧ್ಯಕ್ಷ ಎಂ.ಗೋವಿಂದರಾಜು ಎಂಬುವರು ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ ಮಹಾ ಶಿವರಾತ್ರಿಯ ಭಾಗವಾಗಿ ಫೆಬ್ರವರಿ 18ರಂದು 35 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸಲು ಅಧಿಕಾರಿಗಳು ಅನುಮತಿಸಿದ್ದಾರೆ.
ಇದನ್ನೂ ಓದಿ : 'ನನಗೂ ಒಂದು ಅವಕಾಶ ಕೊಡಿ': ಪ್ರಜಾಧ್ವನಿ ಯಾತ್ರೆಯಲ್ಲಿ ಸಿಎಂ ಬಯಕೆ ವ್ಯಕ್ತಪಡಿಸಿದ ಡಿಕೆಶಿ
ಇದೀಗ ಪಕ್ಕದಲ್ಲಿಯೇ ಆಂಪಿಥಿಯೇಟರ್ ನಿರ್ಮಿಸುವುದು ಮತ್ತು ಮನೋರಂಜನಾ ಕಾರ್ಯಕ್ರಮಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ಅನುಮತಿ ನೀಡುವಂತೆ ಕೋರಿ 2023ರ ಫೆಬ್ರವರಿ 19ರಂದು ಮನವಿ ಮಾಡಿದ್ದಾರೆ. ಗೋವಿಂದರಾಜು ಸಲ್ಲಿಸಿರುವ ಅರ್ಜಿಯಲ್ಲಿ ಬಿಬಿಎಂಪಿ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಯೋಗದಲ್ಲಿ ಬಯಲು ರಂಗಮಂದಿರಕ್ಕಾಗಿ ಬೃಹತ್ ವೃತ್ತಾಕಾರದ ಕಾಂಕ್ರೇಟ್ ಕಟ್ಟಡ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ವಿಳಂಬ.. ಬ್ಯಾಂಕ್ ಮತ್ತು ಕೆಂದ್ರಕ್ಕೆ ಹೈಕೋರ್ಟ್ನಿಂದ ₹ 1 ಲಕ್ಷ ದಂಡ
ಆದರೆ, ಕೆರೆ ಅಂಗಳದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ಯಾವುದೇ ಪ್ರಾಧಿಕಾರದಿಂದ ಕಾಮಗಾರಿಗೆ ಕಾರ್ಯಾದೇಶ ನೀಡಿಲ್ಲ ಎಂದು ವಿವರಿಸಿದರು. ಜತೆಗೆ, ಅಕ್ರಮ ಕಟ್ಟಡ ನಿರ್ಮಾಣದಿಂದ ಉಂಟಾಗುತ್ತಿರುವ ತ್ಯಾಜ್ಯದಿಂದ ಕೆರೆಯನ್ನು ತುಂಬಲಾಗುತ್ತಿದೆ. ಇದರಿಂದಾಗಿ ಕೆರೆ ವ್ಯಾಪ್ತಿ ಕಡಿಮೆಯಾಗುತ್ತಿದೆ. ಹೈಕೋರ್ಟ್ ಆದೇಶದ ಅನ್ವಯ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು (ನೀರಿ) ಮಲ್ಲತ್ತಹಳ್ಳಿ ಕೆರೆ ಸಮೀಕ್ಷೆ ನಡೆಸಿದ್ದು, ಕೆರೆಯು 73 ಎಕರೆಯಲ್ಲಿ ಹರಡಿಕೊಂಡಿದ್ದು, ಇದರಲ್ಲಿ 4. 7 ಎಕರೆ ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಿತ್ತು ಎಂಬ ಅಂಶವನ್ನು ನ್ಯಾಯಪೀಠಕ್ಕೆ ಇದೇ ವೇಳೆ ವಿವರಿಸಿದರು.
ಇದನ್ನೂ ಓದಿ : ಹೆಚ್‌ಡಿಕೆ ಕುಟುಂಬಸ್ಥರಿಂದ ಜಮೀನು ಒತ್ತುವರಿ ಆರೋಪ: ಕಂದಾಯ ಇಲಾಖೆ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಅಸಮಾಧಾನ