ಬೆಂಗಳೂರು: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೂರ್ಣ ಪೀಠದ ತೀರ್ಪನ್ನು ಅಸಾಂವಿಧಾನಿಕ ಎಂದು ಹೇಳಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಅತ್ತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಹರೀಶ್ ಭಾರದ್ವಾಜ್ ಎಂಬುವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಈ ಕುರಿತಂತೆ ಇಂದು ಹರೀಶ್ ಭಾರದ್ವಾಜ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಅತ್ತಾವುಲ್ಲಾ ಪುಂಜಾಲಕಟ್ಟೆ ಹಿಜಾಬ್ ಧರಿಸುವ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪು ಸಂವಿಧಾನಬಾಹಿರವಾಗಿದೆ ಎಂದು ಮಾಧ್ಯಮಗಳ ಎದುರಿಗೆ ಟೀಕಿಸಿದ್ದಾರೆ.
ಅಲ್ಲದೇ, ಈ ಪ್ರಕರಣದ ಅರ್ಜಿದಾರರನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಅಲಿಯಾ ಅಸಾದಿ ಎಂಬುವರು ಹೈಕೋರ್ಟ್ ನಮ್ಮ ವಿರುದ್ಧ ಇಂತಹ ತೀರ್ಪು ನೀಡಲು ಸರ್ಕಾರದ ಪ್ರಭಾವವಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ 1 ಸಾವಿರ ಡಿ ಗ್ರೂಪ್ ನೌಕರರ ನೇಮಕಾತಿ: ಸಚಿವ ಅಶ್ವತ್ಥ ನಾರಾಯಣ
ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಕಾನೂನಿನ ಮೇಲಿನ ಇಂತಹ ಆಕ್ರಮಣ ಸಹಿಸುವಂತದ್ದಲ್ಲ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ವ್ಯವಸ್ಥೆಯಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಮಾತನಾಡುತ್ತಾ ಯುವ ಮನಸ್ಸುಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಫ್‌ಐ ಅಧ್ಯಕ್ಷರು ಮತ್ತಿತರರು ಮಾಡಿರುವ ಇಂತಹ ವಾಗ್ದಾಳಿಗಳು ಸ್ವೀಕಾರಾರ್ಹವಲ್ಲ. ಆದ್ದರಿಂದ, ಇವರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲು ಹೈಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.