ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನ ಕುರಿತಂತೆ ರಾಷ್ಟೀಯ ಹಸಿರು ಪೀಠ (ಎನ್ ಜಿಟಿ) ರಚಿಸಲಾಗಿರುವ ಸಮಿತಿಯು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೇಕೆದಾಟು ಯೋಜನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಹಿನ್ನೆಲೆ ಎನ್ಜಿಟಿ ಸಮಿತಿ ರಚಿಸಿ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದು, ಈಗಾಗಲೇ ಸುಪ್ರೀಂ ಕೋರ್ಟ್ ಹಾಗೂ ಎನ್ಜಿಟಿಗೆ ಯೋಜನೆ ವಿವರ ಸಲ್ಲಿಸಲಾಗಿದೆ. ಅಧಿಕೃತವಾಗಿ ರಾಜ್ಯದಿಂದ ಯಾವುದೇ ದೂರು ಎನ್ಜಿಟಿಗೆ ಹೋಗಿಲ್ಲ. ಸದ್ಯ ಸುಮೊಟೋ ಕೇಸ್ ಸಂಬಂಧ ರಾಜ್ಯದ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಲಾಗುತ್ತದೆ. ಅಂತಿಮವಾಗಿ ನಾಳೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಜೂನ್ 7ರ ಬಳಿಕ ಸಿಎಂ ಬದಲಾವಣೆ ವದಂತಿ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಯಾವ ಬದಲಾವಣೆಯೂ ಇಲ್ಲ. ಊಹಾಪೋಹದ ಮಾತುಗಳಿಗೆ ಉತ್ತರ ಕೊಡುವುದಿಲ್ಲ ಎಂದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಎಸ್ಐಟಿ ಅವರನ್ನೇ ಕೇಳಿ ಎಂದು ಮಾಹಿತಿ ನೀಡದೆ ನಿರ್ಗಮಿಸಿದರು.