ಬೆಂಗಳೂರು: ವಿಜಯೇಂದ್ರ ಖಾಸಗಿ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಿದ್ದಾರೆ. ಹೋದಾಗ ಹಿರಿಯರನ್ನು ಭೇಟಿಯಾಗಿ ಬಂದಿದ್ದಾರೆ ಅಷ್ಟೇ. ನಾಯಕತ್ವದ ಬದಲಾವಣೆಯ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ.
ಬಳಿಕ ನಾಯಕತ್ವ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರೆಶ್ನೆಗೆ ಪ್ರತಿಕ್ರಿಯೆ ನೀಡಿದ ನಳೀನ್ ಕುಮಾರ್ ಕಟೀಲ್, ಸರ್ವ ಸಮ್ಮತವಾಗಿ ಯಡಿಯೂರಪ್ಪನವರೇ ರಾಜ್ಯ ಬಿಜೆಪಿ ನಾಯಕರು. ಮುಖ್ಯಮಂತ್ರಿಯ ಬದಲಾವಣೆ ಬಗ್ಗೆ ಒಬ್ಬ ಶಾಸಕ ಮಾತನಾಡಲು ಸಾಧ್ಯವಿಲ್ಲ, ಎಲ್ಲಾ ಶಾಸಕರು ಅಥವಾ ಹೈಕಮಾಂಡ್ ತೀರ್ಮಾನ ಮಾಡಬೇಕು. ಈ ವಿಚಾರದಲ್ಲಿ ನಾನು ಎಲ್ಲಾ ಶಾಸಕರಿಗೂ ಹೇಳಿದ್ದೇನೆ, ಈ ಬಗ್ಗೆ ಯಾರು ಕೂಡ ಮಾತನಾಡಬಾರದು ಎಂದು. ಸದ್ಯಕ್ಕೆ ಕೋವಿಡ್ಗೆ ಸಂಬಂಧಿಸಿದ ಕೆಲಸ ಮಾತ್ರ ಮಾಡಬೇಕು. ಅದನ್ನು ಮೀರಿ ಬೇರೆ ಏನಾದರು ಮಾತನಾಡಿದರೆ ಪಾರ್ಟಿ ಗಮನಿಸುತ್ತದೆ. ನಿಯಮ ಮೀರಿ ಮಾತನಾಡಿದರೆ ಅತಂಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ನಾನು ಕರೆ ಮಾಡಿ ಎಲ್ಲರ ಜೊತೆ ಮಾತನಾಡಿದ್ದೇನೆ, ಯಾರೂ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಈ ಆಸ್ಪತ್ರೆಯನ್ನ ಮುನಿರತ್ನ ನಿರ್ಮಿಸುತ್ತಿದ್ದಾರೆ. 400 ಬೆಡ್ಗಳುಳ್ಳ ಆಸ್ಪತ್ರೆಯಾಗಿದ್ದು, 80 ಐಸಿಯು ಬೆಡ್ ಲಭ್ಯವಿರುತ್ತದೆ. ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿವೆ, ಖಾಸಗಿ ಆಸ್ಪತ್ರೆಗೆ ಸರಿಸಮಾನವಾಗಿ ವಿನ್ಯಾಸಗೊಳಿಸಿದ್ದಾರೆ. ಆಕ್ಸಿಜನ್ ಬೆಡ್, ಐಸಿಯು ಹಾಗೂ ವೆಂಟಿಲೇಟರ್ ಕೊರತೆಯಿದೆ. ಆದರೆ ಈ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಕಲ್ಪಿಸಲಾಗಿದೆ. ಆಕ್ಸಿಜನ್ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ, ನಾನು ಈ ವಿಚಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಬಡತನದಲ್ಲಿದ್ದವರಿಗೆ ಎಲ್ಲಾ ಸೌಲಭ್ಯ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಮುನಿರತ್ನ ಪ್ರತಿಕ್ರಿಯೆ ನೀಡಿ,10-15 ದಿನದಲ್ಲಿ ಆಸ್ಪತ್ರೆ ಲೋಕಾರ್ಪಣೆಗೊಳಿಸುತ್ತೇವೆ, ಸಾಕಷ್ಟು ಸಮಸ್ಯೆಗಳ ನಡುವೆಯೂ 40 ದಿನದಲ್ಲಿ ಕಾಮಗಾರಿ ಪೂರ್ಣ ಮುಗಿಸುತ್ತೇವೆ. ಇನ್ನೂ 13 ದಿನ ಬಾಕಿ ಇದ್ದು, ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆ ಸಿದ್ಧಗೊಳ್ಳಲಿದೆ. ಕ್ಷೇತ್ರದಲ್ಲಿ ಲಸಿಕೆಗೆ ಕೊರತೆ ಆಗಿಲ್ಲ. ಹಂತ ಹಂತವಾಗಿ ನೀಡುತ್ತಿದ್ದೇವೆ ಎಂದರು.