ಬೆಂಗಳೂರು: ಇಂದು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದರು.
ಮಾನ್ಸೂನ್ ಕರ್ನಾಟಕದ ಒಳನಾಡಿನಲ್ಲಿ ಚುರುಕಾಗಿದೆ. ಮಾಗಡಿ 13 ಸೆಂ.ಮೀ, ಚಿತ್ರದುರ್ಗ 10 ಸೆಂ.ಮೀ, ಚಿಕ್ಕನಾಯಕನಹಳ್ಳಿ, ಚಾಮರಾಜನಗರ, 8 ಸೆಂ.ಮೀ, ಕೊಪ್ಪಳದಲ್ಲಿ 7 ಸೆಂ.ಮೀಟರ್ ಮಳೆಯಾಗಿದೆ. ಪೂರ್ವ ಮಧ್ಯ ಭಾಗದ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತವಾಗಿದೆ. ಇದು ಇಪ್ಪತ್ನಾಲ್ಕು ಗಂಟೆಗಳಲ್ಲಿ ಇನ್ನಷ್ಟು ತೀವ್ರವಾಗಬಹುದು.
ಅಕ್ಟೋಬರ್ 14ರಂದು ಉತ್ತರ ಆಂಧ್ರ ಪ್ರದೇಶದ ಕರಾವಳಿಯಲ್ಲಿ ದಾಟುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಅ.11 ರಿಂದ 13 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಅ.14 ರಂದು ಎಲ್ಲಾ ಕಡೆ ಮಳೆಯಾಗಲಿದೆ. ಉತ್ತರ ಕನ್ನಡ , ಉಡುಪಿ ಹಾಗೂ ದ.ಕನ್ನಡ ಜಿಲ್ಲೆಗಳಲ್ಲಿ ಅ.10 ರಿಂದ 13 ರವರೆಗೆ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅಲರ್ಟ್ ಕೊಡಲಾಗಿದೆ ಎಂದರು. ಅ.14 ಎಲ್ಲೋ ಅಲರ್ಟ್ ಕೊಡಲಾಗಿದೆ.
ಉತ್ತರ ಒಳನಾಡಿನಲ್ಲಿ ಅ.10-14 ರವರೆಗೆ ಎಲ್ಲಾ ಕಡೆ ಮಳೆಯಾಗಲಿದೆ. ಹಾವೇರಿ, ಬಿಜಾಪುರ, ಗದಗ, ಬೀದರ್, ಬಾಗಲಕೋಟೆ, ಕೊಪ್ಪಳ ಧಾರವಾಡ, ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದ್ದು, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬೆಳಗಾವಿಗೆ ಎಲ್ಲೋ ಅಲರ್ಟ್ ಕೊಡಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 10 ರಿಂದ 13 ರವರೆಗೆ ಎಲ್ಲಾ ಕಡೆ ಮಳೆಯಾಗಲಿದೆ ಎಂದರು. ಇನ್ನು ಹಲವು ಜಿಲ್ಲೆಗಳಿಗೆ ನಾಳೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದರು.