ಬೆಂಗಳೂರು: ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್‍ನ 5ನೇ ದಿನದ ಘೋಷಣೆಯಲ್ಲಿ ಕಾರ್ಮಿಕರಿಗೆ ಉದ್ಯೋಗ ಸೃಜನ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಕೈಗಾರಿಕೆ ವಲಯದ ಕಾನೂನು ಸುಧಾರಣೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಕೇಂದ್ರ ಸರ್ಕಾರದ “ಆತ್ಮ ನಿರ್ಭರ್ ಭಾರತ” ದ ಆಶಯ ಸಾಕಾರಗೊಳಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲೂ ಶ್ರಮಿಸಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಆಶ್ವಾಸನೆ ನೀಡಿದ್ದಾರೆ.
"ಟಿ.ವಿ. ಚಾನೆಲ್‍ಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ಪಾಠ ಹೇಳುವುದು ಒಂದು ಒಳ್ಳೆಯ ನಿರ್ಧಾರ. ಇದರಿಂದ ಶಾಲಾ ದಿನಗಳನ್ನು ಕಳೆದುಕೊಂಡ ಮಕ್ಕಳಿಗೆ ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆ ಇಲ್ಲಿಯವರೆಗೆ ನಾವು ಅಳವಡಿಸಿಕೊಂಡು ಬಂದ ಔಪಚಾರಿಕ ಪದ್ಧತಿಯ ವಿದ್ಯಾರ್ಜನೆಯ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇ-ಎಜುಕೇಷನ್ ಯೋಜನೆ ದೇಶದ ವಿದ್ಯಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದಿದ್ದಾರೆ.
ಕೋವಿಡ್-19ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಔದ್ಯೋಗಿಕ ಘಟಕಗಳು ಮತ್ತು ಉದ್ಯಮಿ ವಿರುದ್ಧ ಆರ್ಥಿಕ ದಿವಾಳಿತನದ ಕಾನೂನಿಗೆ ಒಳಪಡಿಸಲಾಗುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಎಂ.ಎಸ್.ಎಂ.ಇ. ಮಾಲೀಕರಿಗೆ ನೆಮ್ಮದಿ ತರಲಿದೆ ಮತ್ತು ಅವರಿಗೆ ಇನ್ನೊಮ್ಮೆ ಆರ್ಥಿಕ ಪುನಃಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಎಲ್ಲಾ ವಲಯಗಳು ಖಾಸಗಿ ಸಹಭಾಗಿತ್ವಕ್ಕೆ ಮುಕ್ತವಾಗಿವೆ ಎಂದು ಘೋಷಿಸಿದ್ದು, ಇದು ನಷ್ಟದಲ್ಲಿರುವ ಸರ್ಕಾರಿ ವಲಯದ ಸಂಸ್ಥೆಗಳಿಗೆ ಹೊಸ ಜೀವ ಬಂದಂತಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ರಾಜ್ಯ ಜಿ.ಡಿ.ಪಿ.ಯ 3% ರಿಂದ 5% ಕ್ಕೆ ಏರಿಸಿದ್ದುಸ ರಾಜ್ಯಗಳು ಆರ್ಥಿಕವಾಗಿ ಉಸಿರಾಡುವಂತೆ ಮಾಡಿದೆ. ಕೋವಿಡ್-19 ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯಗಳು ತಮ್ಮ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಪುನಃಶ್ಚೇತನಗೊಳಿಸುವಲ್ಲಿ ಸಹಾಯಕವಾಗಲಿದೆ" ಎಂದು ಸಿಎಂ ತಿಳಿಸಿದ್ದಾರೆ.