ಬೆಂಗಳೂರು: ಅರಣ್ಯೀಕರಣಕ್ಕೆ ಅಗತ್ಯವಿರುವ ಜಮೀನಿನ ಲ್ಯಾಂಡ್ ಬ್ಯಾಂಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದ್ದಾರೆ. ನಗರದ ಖನಿಜಭವನದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಭಾಂಗಣದಲ್ಲಿ ಇಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಗಣಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಗಣಿಗಾರಿಕೆಗೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳ ಬಗ್ಗೆ ಅವರು ಚರ್ಚೆ ನಡೆಸಿದರು.
ಪರಿಹಾರ ಅರಣ್ಯೀಕರಣಕ್ಕೆ ಲ್ಯಾಂಡ್ ಬ್ಯಾಂಕ್: ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಕಂಪನಿಗಳು ಪರಿಹಾರ ಅರಣ್ಯೀಕರಣಕ್ಕೆ ಜಮೀನು ಖರೀದಿಸುವುದು ಹಾಗೂ ಅದರಲ್ಲಿ ಅರಣ್ಯ ಅಭಿವೃದ್ದಿಗೊಳಿಸುವುದು ಕಡ್ಡಾಯ. ಇದರ ಪಾಲನೆಗೆ ಕಂಪನಿಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನನ್ನು ಖರೀದಿಸುವುದು ಹಾಗೂ ಅಗತ್ಯ ಪರಿವರ್ತನೆ ಮಾಡಿಕೊಳ್ಳುವುದು ಅವಶ್ಯಕ. ಬಹಳಷ್ಟು ಸಂದರ್ಭಗಳಲ್ಲಿ ಅಗತ್ಯ ಜಮೀನು ಲಭ್ಯತೆ ಹಾಗೂ ಅದರ ಪರಿವರ್ತನೆಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಇದಕ್ಕೆ ಸಮಯಾವಾಕಾಶ ನೀಡುವಂತೆ ಗಣಿ ಕಂಪನಿಯ ಪ್ರತಿನಿಧಿಗಳು ಸಚಿವರನ್ನು ಮನವಿ ಮಾಡಿಕೊಂಡರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಕಂದಾಯ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಲಭ್ಯವಿರುವ ಹಾಗೂ ಪರಿಹಾರ ಅರಣ್ಯೀಕರಣಕ್ಕೆ ಅನುಕೂಲವಾಗುವಂತಹ ಜಮೀನಿನ ಲ್ಯಾಂಡ್ ಬ್ಯಾಂಕ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರಿಂದ ಗಣಿ ಕಂಪನಿಗಳ ಈ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಿ ಗಣಿಗಾರಿಕೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೇ, ಭೂ ಪರಿವರ್ತನೆಯು ಸರಳೀಕರಣವಾಗಲಿದೆ ಎಂದು ಸಚಿವರು ತಿಳಿಸಿದರು.
ಅದಿರು ಸಾಗಾಣೆಯ ಸಮಯ ಹೆಚ್ಚಳಕ್ಕೆ ಚಿಂತನೆ: ಮೇ 2022 ರ ನಂತರ ಅದಿರು ಸಾಗಾಣೆಯ ಸಮಯವನ್ನು ಬದಲಿಸಲಾಗಿದ್ದು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಗಣಿಗಾರಿಕೆಯ ಪ್ರದೇಶದಿಂದ ರೈಲ್ವೇ ಸ್ಲೈಡಿಂಗ್ ಸ್ಥಳಕ್ಕೆ ಅದಿರು ಸಾಗಣೆಗೆ ರಾತ್ರಿ 10 ರ ವರೆಗೆ ಅವಕಾಶ ನೀಡಬೇಕು ಎಂದು ಗಣಿ ಕಂಪನಿಗಳ ಪ್ರತಿನಿಧಿಗಳು ಮನವಿಯನ್ನು ಸಕಾರಾತ್ಮಕವಾಗಿ ಪರಿಶೀಲಿಸುವಂತೆ ಸಚಿವ ಹಾಲಪ್ಪ ಆಚಾರ್ ಅಧಿಕಾರಿಗಳಿಗೆ ಸೂಚಿಸಿದರು.
ನಿಯಮಾವಳಿಗಳ ಸರಳೀಕರಣಕ್ಕೂ ಸೂಚನೆ: ಅದಿರು ಸಾಗಾಣಿಕೆಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಹಿ ಕಡ್ಡಾಯಗೊಳಿಸಲಾಗಿದ್ದು, ರಜೆಯ ಸಂಧರ್ಭದಲ್ಲಿ ಬಲ್ಕ್ ಲೋಡಿಂಗ್ ಗೆ ತುಂಬಾ ತೊಂದರೆ ಅಗುತ್ತಿರುವ ಬಗ್ಗೆ ಗಣಿ ಕಂಪನಿಗಳ ಪ್ರತಿನಿಧಿಗಳು ಸಚಿವರ ಗಮನಕ್ಕೆ ತಂದರು. ಪ್ರತಿಯೊಂದು ಸಂಧರ್ಭದಲ್ಲೂ ಅಧಿಕಾರಿಗಳ ಸಹಿ ಪಡೆಯಲು ಕಾಯುತ್ತಾ ಕೂರುವುದು ಯಾವುದೇ ವ್ಯವಹಾರದ ಅಭಿವೃದ್ದಿಗೆ ಸೂಕ್ತವಲ್ಲ. ಇದನ್ನು ಸರಳೀಕರಿಸುವ ನಿಟ್ಟಿನಲ್ಲಿ ಅಗತ್ಯ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು ಹಾಗೂ ರಾಜ್ಯದ ಆರ್ಥಿಕತೆಗೆ ಹೆಚ್ಚಿನ ರಾಜಸ್ವ ಬರುವಂತಹ ವ್ಯವಸ್ಥೆಯನ್ನು ರಚಿಸಬೇಕು ಎಂದು ಸಚಿವರು ಸೂಚಿಸಿದರು.
ಗಣಿ ಬಾಧಿತ ಪ್ರದೇಶಗಳಿಗೆ ಸಿಎಸ್‌ಆರ್ ನಿಧಿ ಬಳಸಿ: ಗಣಿ ಕಂಪನಿಗಳು ತಾವು ಗಣಿಗಾರಿಕೆ ನಡೆಸುತ್ತಿರುವ ಸ್ಥಳಗಳಲ್ಲಿ ತಮ್ಮ ಸಿಎಸ್‌ಆರ್ ನಿಧಿಯನ್ನು ಬಳಸಿ ಆಯಾ ಪ್ರದೇಶಗಳಲ್ಲಿ ಶೈಕ್ಷಣಿಕ ಅಭಿವೃದ್ದಿಯಂತಹ ಕಾರ್ಯದಲ್ಲಿ ತೊಡಗಿಕೊಳ್ಳುವುದು ಅಗತ್ಯ. ಹಲವಾರು ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಬೇರೆ ಪ್ರದೇಶಗಳಿಗೆ ಬಳಸುವ ಮೂಲಕ ಹಿಂದುಳಿದ ಪ್ರದೇಶಗಳನ್ನು ಕಡೆಗಣನೆಗೊಳಿಸುತ್ತಿರುವುದು ಸರಿಯಲ್ಲ ಎಂದರು. ಇದೇ ವೇಳೆ ನಮ್ಮ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶವನ್ನೂ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ:ವಿಚ್ಛೇದನ: ಎರಡು ಕಾಯಿದೆಗಳಡಿ ಪತ್ನಿ ಪರಿಹಾರ ಪಡೆಯಲು ಅರ್ಹ- ಹೈಕೋರ್ಟ್