ಬೆಂಗಳೂರು: ರಾಜ್ಯದ ನಿಗದಿತ ಕೋವಿಡ್ ಆಸ್ಪತ್ರೆ (ಡಿಸಿಎಚ್), ನಿಗದಿತ ಕೋವಿಡ್ ಹೆಲ್ತ್ ಸೆಂಟರ್ (ಡಿಸಿಎಚ್‍ಸಿ) ಹಾಗೂ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ ಇರುವ ಐಸೊಲೇಷನ್ ಬೆಡ್‍ಗಳ ವಿವರಗಳನ್ನು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಸಲ್ಲಿಸಿದೆ.
ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ನ್ಯಾಯ ಪೀಠಕ್ಕೆ ಸಲ್ಲಿಸಲಾಗಿರುವ ಲಿಖಿತ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ರಾಜ್ಯದ 37 ಡಿಸಿಹೆಚ್‍ಗಳಲ್ಲಿ ಒಟ್ಟು 8,494 ಐಸೊಲೇಷನ್ ಬೆಡ್‍ಗಳಿದ್ದು, ಇದರಲ್ಲಿ ದೃಢಪಟ್ಟ ಪ್ರಕರಣಗಳಿಗೆ 5,031 ಬೆಡ್, ಶಂಕಿತ ಪ್ರಕರಣಗಳಿಗೆ 3,463 ಬೆಡ್‍ಗಳು ಲಭ್ಯ ಇದೆ. ಅದರಲ್ಲಿ ಆಕ್ಸಿಜನ್ ಸೌಲಭ್ಯವುಳ್ಳ 4,174 ಬೆಡ್, 982 ಐಸಿಯು ಬೆಡ್, 525 ವೆಂಟಿಲೇಟರ್ ಬೆಡ್‍ಗಳಿವೆ.
ಅದೇ ರೀತಿ ಡಿಸಿಹೆಚ್‍ಸಿಗಳಲ್ಲಿ ಒಟ್ಟು 36,293 ಐಸೊಲೇಷನ್ ಬೆಡ್‍ಗಳಿವೆ. ಇದರಲ್ಲಿ ದೃಢಪಟ್ಟ ಪ್ರಕರಣಗಳಿಗೆ 12,529 ಬೆಡ್, ಶಂಕಿತ ಪ್ರಕರಣಗಳಿಗೆ 23,767 ಬೆಡ್‍ಗಳನ್ನು ಮೀಸಲಿಡಲಾಗಿದೆ. ಒಟ್ಟು ಬೆಡ್‍ಗಳ ಪೈಕಿ ಆಕ್ಸಿಜನ್ ಸೌಲಭ್ಯದ 4,972 ಬೆಡ್‍ಗಳು, 1,976 ಐಸಿಯು ಬೆಡ್‍ಗಳು, 979 ವೆಂಟಿಲೇಟರ್ ಬೆಡ್‍ಗಳಿವೆ.
ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ 1,06,292 ಐಸೊಲೇಷನ್ ಬೆಡ್‍ಗಳಿವೆ. ಈ ಪೈಕಿ ದೃಢಪಟ್ಟ ಪ್ರಕರಣಗಳಿಗೆ 25,805 ಬೆಡ್‍ಗಳು, ಶಂಕಿತ ಪ್ರಕರಣಗಳಿಗೆ 82,383 ಬೆಡ್‍ಗಳನ್ನು ಮೀಸಲಿಡಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ವಿವರ ದಾಖಲಿಸಿಕೊಂಡಿರುವ ಪೀಠ, ಇದರ ಬಗ್ಗೆ ಮುಂದಿನ ವಿಚಾರಣೆ ವೇಳೆ ಪರಿಶೀಲಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದೆ.