ಬೆಂಗಳೂರು: ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಟ 2,000 ರೂಪಾಯಿಯವರೆಗೆ ಪಾವತಿಸಲು 2023-24ನೇ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ (SDRF) 105 ಕೋಟಿ ರೂಪಾಯಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಕೇಂದ್ರ ಸರ್ಕಾರದಿಂದ ಬರ ನಿರ್ವಹಣೆಗಾಗಿ NDRF ಅನುದಾನ ನಿರೀಕ್ಷಿಸಿ, ಕೇಂದ್ರ ಸರ್ಕಾರದ ಗೃಹ ಮಂತ್ರಾಲಯ 11-07-2023ರಲ್ಲಿ ಹೊರಡಿಸಿರುವ SDRF ಮಾರ್ಗಸೂಚಿ ಅನ್ವಯ ಅರ್ಹ ರೈತರಿಗೆ ಬರ ಪರಿಸ್ಥಿತಿಯಿಂದ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಟ 2 ಹೆಕ್ಟೇರ್ ಸೀಮಿತಗೊಳಿಸಿ ಇನ್ಪುಟ್ ಸಬ್ಸಿಡಿ ನಿಗದಿಪಡಿಸಲಾಗಿದೆ. ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್ಗೆ 8,500 ರೂಪಾಯಿ, ನೀರಾವರಿ ಬೆಳೆಗೆ 17,000 ರೂಪಾಯಿ, ಬಹುವಾರ್ಷಿಕ ಬೆಳೆಗೆ 22,500 ರೂಪಾಯಿ ನಿಗದಿ ಮಾಡಲಾಗಿದೆ.
ಷರತ್ತುಗಳ ಪಾಲನೆಗೆ ಒಳಪಟ್ಟು ಬಿಡುಗಡೆಗೊಳಿಸಲು ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ. ಪ್ರತಿ ರೈತರಿಗೆ ಗರಿಷ್ಟ 2,000 ರೂ. ರವರೆಗೆ ರೈತರಿಗೆ ಪಾವತಿಸಲು 2023-24ನೇ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ 105 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆ ಆದ ನಂತರ SDRF ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಷರತ್ತುಗಳೇನು?:
- ಬೆಳೆಹಾನಿ ಪರಿಹಾರವನ್ನು (Input subsidy) ಭೂಮಿ ಸೆಲ್ ನಿರ್ವಹಿಸುತ್ತಿರುವ ಪರಿಹಾರ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತಿದ್ದು, ಪ್ರಸ್ತುತ ವರ್ಷ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರೈತರಿಗೆ ತ್ವರಿತ ಮತ್ತು ಕ್ರಮಬದ್ಧವಾಗಿ ಬೆಳೆಹಾನಿ ಪರಿಹಾರವನ್ನು ವಿತರಿಸಲು ಇ-ಆಡಳಿತ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ FRUITS ದತ್ತಾಂಶದ ಮತ್ತು 2023ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯನ್ನು ಭೂಮಿ ಸೆಲ್ನವರು ಇ-ಆಡಳಿತ ಇಲಾಖೆಯಿಂದ ಪಡೆಯಬೇಕು.
- ಬೆಳೆಹಾನಿ ಪರಿಹಾರದ ವಿತರಣೆಯಲ್ಲಿ ಪಾರದರ್ಶಕತೆ ತರಲು, ದತ್ತಾಂಶ ನಿರ್ವಹಣೆಯಲ್ಲಿ ಆಗುತ್ತಿದ್ದ ತಪ್ಪುಗಳು ಮತ್ತು ದೋಷಗಳನ್ನು ತಡೆಗಟ್ಟಲು ಅರ್ಹ ರೈತರುಗಳಿಂದ ಯಾವುದೇ ರೀತಿಯ ಅರ್ಜಿಗಳನ್ನು ಪಡೆಯದೆ ಸಕ್ಷಮ ದತ್ತಾಂಶಗಳ ಅನುಸಾರ ಅರ್ಹತೆಗೆ ಅನುಗುಣವಾಗಿ ಬೆಳೆ ಹಾನಿ ಪರಿಹಾರವನ್ನು FRUITS ತಂತ್ರಾಂಶದಲ್ಲಿ ನೋಂದಣಿಯಾಗಿ Farmers ID ಹೊಂದಿರುವ ಹಾಗೂ ಬರ ಘೋಷಣೆಯಾಗಿರುವ ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮೆಮೊರಾಡಂನಲ್ಲಿ ನಮೂದಾಗಿರುವ ತಾಲ್ಲೂಕುವಾರು (ಮಳೆಯಾಶ್ರಿತ /ನೀರಾವರಿ /ಬಹುವಾರ್ಷಿಕ) ವಿಸ್ತೀರ್ಣ ತಾಲೂಕುವಾರು ನಮೂದು ಆಗಿರುವ ಬೆಳೆ ಹಾನಿಗೆ ಒಳಪಟ್ಟಿರುವ ಬೆಳೆಗಳಿಗೆ ಸೀಮಿತಗೊಳಿಸಿ ಬೆಳೆ ಹಾನಿ ಪರಿಹಾರ ನೀಡಬೇಕು.
- ಲೆಕ್ಕಾಚಾರ ಮಾಡಿ ಅರ್ಹತೆಯ ಅನುಗುಣವಾಗಿ 2,000 ರೂ.ವರೆಗೆ ಬೆಳೆ ಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಪರಿಪೂರ್ಣ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ FRUITS ತಂತ್ರಾಂಶದಲ್ಲಿ ನೋಂದಣಿಯಾಗಿರುವ Farmers ID ಹೊಂದಿರುವ ಆಧಾರ ಜೋಡಣೆಯಾಗಿರುವ ಅರ್ಹ ರೈತರಿಗೆ DBT ಮೂಲಕ ನಿಯಮಾನುಸಾರ ಪಾವತಿಸಬೇಕು.
- ಭೂಮಿ ಸೆಲ್ನವರು payment logic ಪ್ರಕಾರ ತಾಲ್ಲೂಕಿನಲ್ಲಿ ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಅರ್ಹ ರೈತನಿಂದ ಪ್ರಾರಂಭಿಸಿ ಅತೀ ಹೆಚ್ಚು ಭೂಮಿಯನ್ನು ಹೊಂದಿರುವ ಅರ್ಹ ರೈತನಿಗೆ ಆರೋಹಣ ಕ್ರಮದಲ್ಲಿ (ascending order) ಪಾವತಿ ಮಾಡಬೇಕು. ಇದರಲ್ಲಿಯೂ ಸಹ ಮಳೆಯಾಶ್ರಿತ ಬೆಳೆ ನಂತರ ನೀರಾವರಿ ಬೆಳೆ, ತದನಂತರ ಬಹು ವಾರ್ಷಿಕ ಬೆಳೆಗೆ ಈ ಕ್ರಮದಲ್ಲಿ ಪರಿಹಾರ ಮೊತ್ತವನ್ನು ಪಾವತಿ ಮಾಡಬೇಕು.
- ಫಲಾನುಭವಿ ಜಮೀನಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯ ದಾಖಲೆಗಳು (RTC ಇತ್ಯಾದಿ) ಹೊಂದಿರಬೇಕು. ಬೆಳೆಹಾನಿ ಪರಿಹಾರ ಪಡೆಯುವ ಫಲಾನುಭವಿಯ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು. ಅಂತಹ ಫಲಾನುಭವಿಗಳಿಗೆ ನಿಯಮಾನುಸಾರ ಆಧಾರ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ಬೆಳೆ ಹಾನಿ ಪರಿಹಾರ ಪಾವತಿ ಮಾಡಬೇಕು.
- ಈ ಹಿಂದೆ ನೀರಾವರಿ ಯೋಜನೆಗಳಿಗೆ ರೈತರ ಕೃಷಿ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ರೈತರಿಗೆ ಭೂ ಪರಿಹಾರ ನೀಡಲಾಗಿದೆ. ಆದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಪಹಣಿಗಳಲ್ಲಿ ನೀರಾವರಿ ಇಲಾಖೆಯ ಹೆಸರು ಸೇರ್ಪಡೆಯಾಗಿರುವುದಿಲ್ಲ. ಆದ್ದರಿಂದ ಭೂಮಿ ಸೆಲ್ನವರು ಭೂಸ್ವಾಧೀನವಾದ ವಿಸ್ತೀರ್ಣಕ್ಕೆ ಭೂಮಿ ದತ್ತಾಂಶದಲ್ಲಿ ಬೆಳೆ ಸಮೀಕ್ಷೆಯಲ್ಲಿ ಸೇರಿದ್ದರೂ ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸಬಾರದು.
- ಕೃಷಿಯೇತರ ಉದ್ದೇಶಕ್ಕಾಗಿ ಕೃಷಿ ಜಮೀನು ಭೂ-ಪರಿವರ್ತನೆಯಾಗಿ ಬೆಳೆ ಸಮೀಕ್ಷೆಯಲ್ಲಿ ಸೇರ್ಪಡೆಯಾದರೂ ಕೂಡ ಇಂತಹ ಪ್ರಕರಣಗಳನ್ನು ಭೂಮಿ ಸೆಲ್ನವರು ಬೆಳಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ. ಸರ್ಕಾರಿ ಜಮೀನುಗಳನ್ನು ಭೂಮಿ ದತ್ತಾಂಶದಲ್ಲಿ ಗುರುತಿಸಿ ಬೆಳೆಹಾನಿ ಪರಿಹಾರ ನೀಡದಂತೆ ಭೂಮಿ ಸೆಲ್ನವರು ನೋಡಿಕೊಳ್ಳಬೇಕು.
- RTC ಕಾಲಂದಲ್ಲಿ ಅಧಿಕೃತವಾಗಿ ಭೂ ಪರಿವರ್ತನೆಯಾಗದೆ ಇದ್ದರೂ ಸಹ ವಾಸ್ತವಿಕವಾಗಿ ಇತ್ತೀಚಿನ ಬೆಳೆ ಸಮೀಕ್ಷೆಯ ದತ್ತಾಂಶದಲ್ಲಿ NA (ಭೂ ಪರಿವರ್ತನೆ)ಎಂದು ದಾಖಲಿಸಿರುವ ಕೃಷಿ ಜಮೀನುಗಳನ್ನು ಭೂಮಿ ಸೆಲ್ನವರು ಬೆಳೆ ಹಾನಿ ಪರಿಹಾರಕ್ಕೆ, ಪರಿಗಣಿಸುವಂತಿಲ್ಲ. ಜಂಟಿ ಖಾತೆದಾರರಾಗಿದ್ದಲ್ಲಿ FRUITS ತಂತ್ರಾಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಬೆಳೆಹಾನಿ ಪರಿಹಾರ ಪಾವತಿಸಬೇಕು.
- ಒಂದೇ ಹಿಸ್ಸಾ ಜಮೀನುಗಳಲ್ಲಿ ಬಹು ಮಾಲೀಕರಿದ್ದಲ್ಲಿ ಒಂದೇ ವಿಸ್ತೀರ್ಣದ ಕ್ಷೇತ್ರಕ್ಕೆ ಎರಡು ಸಲ ಬೆಳೆ ಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಸೆಲ್ನವರು ನೋಡಿಕೊಳ್ಳಬೇಕು. ಒಂದೇ ಹಿಸ್ಸಾ ಜಮೀನಿಗೆ ಒಂದೇ ವಿಸ್ತೀರ್ಣಕ್ಕೆ ಎರಡು ಸಲ (ಡಬಲ್ ಪೇಮೆಂಟ್) ಬೆಳಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಸೆಲ್ನವರು ನೋಡಿಕೊಳ್ಳಬೇಕು.
- ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಾಲ್ಲೂಕುಗಳಲ್ಲಿ ಕೃಷಿ ಜಮೀನುಗಳನ್ನು ಹೊಂದಿದ್ದಲ್ಲಿ ಅರ್ಹತೆಯಂತೆ ಬೆಳೆ ಪರಿಹಾರವನ್ನು ಒಬ್ಬ ರೈತನಿಗೆ ಗರಿಷ್ಟ ಕ್ಷೇತ್ರ 2 ಹಕ್ಕೇರ್ಗಿಂತ ಹೆಚ್ಚಿಗೆ ನೀಡದಂತೆ ಭೂಮಿ ಸೆಲ್ನವರು ನೋಡಿಕೊಳ್ಳಬೇಕು. ಮೆಮೊರಾಡಂನಲ್ಲಿ ಸಲ್ಲಿಸಲಾದ ತಾಲ್ಲೂಕುವಾರು, ಬೆಳೆವಾರು ಬೆಳೆಹಾನಿ ವಿವರಗಳಲ್ಲಿ, ಒಂದೇ ಹಿಸ್ಸಾ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದಿದಲ್ಲಿ ಯಾವ ಬೆಳೆಯು ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗಿದೆಯೋ, ಆ ಬೆಳೆಯನ್ನು ಪರಿಹಾರ ಮೊತ್ತವನ್ನು ನೀಡಲು payment logic ನಲ್ಲಿ ಭೂಮಿ ಸೆಲ್ನವರು ಪರಿಗಣಿಸಬೇಕು.
- ಆಧಾರ್ ಮತ್ತು RTCಗಳಲ್ಲಿನ ಹೆಸರುಗಳಲ್ಲಿ ಶೇಕಡಾ 70ರಷ್ಟು ಹೊಂದಾಣಿಕೆಯಾಗದ ಪ್ರಕರಣಗಳನ್ನು ಪರಿಶೀಲನೆಗಾಗಿ ತಹಶೀಲ್ದಾರರ ಲಾಗಿನ್ಗೆ ಭೂಮಿ ಸೆಲ್ನವರು ಕಳುಹಿಸಬೇಕು. ಅಂತಹ ಪ್ರಕರಣಗಳನ್ನು ಸ್ಥಳೀಯವಾಗಿ ವಾಸ್ತವಾಂಶಗಳ ಪರಿಶೀಲನೆ ಮಾಡಿ ಐದು ದಿನಗಳಲ್ಲಿ ತಹಶೀಲ್ದಾರ್ರವರು bio-metric ದೃಢೀಕರಣದ ಮೂಲಕ ನಿಯಮಗಳಂತೆ ಷರಾ ನಮೂದಿಸಬೇಕು.
- ಬೆಳೆಹಾನಿ ಪರಿಹಾರ ಪ್ರಾರಂಭ ಮಾಡುವುದಕ್ಕಿಂತ ಪೂರ್ವದಲ್ಲಿ ಮೇಲಿನ ಎಲ್ಲಾ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಹಾನಿ ಪರಿಹಾರ ಪಾವತಿಸಲು ತಮ್ಮ ಜಿಲ್ಲೆಯಲ್ಲಿನ ಪರಿಹಾರ ದತ್ತಾಂಶಕ್ಕೆ digital signature ಮೂಲಕ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಬೇಕು. ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮವಾರು, ಫಲಾನುಭವಿವಾರು ವಿತರಣೆಯಾಗಿ ರುವ ಬೆಳೆಹಾನಿ ಪರಿಹಾರದ ವಿವರಗಳನ್ನು ಭೂಮಿ ಸೆಲ್ನವರು ಪರಿಹಾರ ತತ್ರಾಂಶದ ಅಧಿಕೃತಜಾಲ ತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಪಾರದರ್ಶಕತೆಗಾಗಿ ಅಳವಡಿಸಬೇಕು.
ಇದನ್ನೂ ಓದಿ: 354 ವಿದ್ಯಾರ್ಥಿಗಳಿಗೆ 3 ಶೌಚಾಲಯ! ಶೌಚಕ್ಕೆ ಸಾಲುಗಟ್ಟಿ ನಿಲ್ಲಬೇಕು ಸರ್ಕಾರಿ ಶಾಲೆಯ ಮಕ್ಕಳು