ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದವರನ್ನು ದಮನ ಮಾಡುವ ಸರ್ವಾಧಿಕಾರಿ ಧೋರಣೆಯನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಸರ್ಕಾರದ ವಿರುದ್ಧ ಸುದ್ದಿ ಮಾಡಿದ್ದಕ್ಕಾಗಿ ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದ್ದು, ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದಲ್ಲಿ ನಡೆದ ಪಕ್ಷದ ಬೆಂಗಳೂರು ಶಾಸಕರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಅನುದಾನ ಸೇರಿದಂತೆ ಇತ್ಯಾದಿ ವಿಚಾರದಲ್ಲಿ ಅಸಮಧಾನಗೊಂಡು ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರ ಮಾಧ್ಯಮಗಳಲ್ಲಿ ವರದಿಯಾಯಿತು.
ಇದರ ಬೆನ್ನಲ್ಲೇ ಅಸಮಧಾನಿತ ಶಾಸಕರನ್ನು ಕರೆದು ಮಾತನಾಡುವ ಕೆಲಸ ಮುಖ್ಯಮಂತ್ರಿಗಳಿಂದ ಆಯಿತು. ನಂತರ ಹನ್ನೊಂದು ಜನ ಶಾಸಕರು ಪತ್ರ ನಾವು ಬರೆದಿಲ್ಲ, ಅದು ನಕಲಿ ಪತ್ರ ಎಂದು ದೂರು ಕೊಟ್ಟರು, ತಕ್ಷಣ ಮಾಧ್ಯಮದವರಿಗೆ ನೋಟಿಸ್ ಕೊಡಲಾಗುತ್ತಿದೆ. ಮೊದಲು ಪತ್ರಕ್ಕೆ ಸಹಿ ಮಾಡಿದವರನ್ನು ಕರೆಯಿಸಿ ವಿಚಾರಣೆ ಮಾಡಬೇಕಿತ್ತು. ಅವರು ಸಹಿ ಮಾಡಿದ್ದು ನಕಲಿಯಾ?, ನಿಜಾನಾ ಎನ್ನುವುದನ್ನು ವಿಚಾರಣೆ ಮಾಡಬೇಕು. ಶಾಸಕರು ಸಹಿ ಮಾಡಿರುವ ಬಗ್ಗೆ ಎಫ್ ಎಸ್ ಎಲ್ ಲ್ಯಾಬ್ಗೆ ಕಳುಹಿಸಿ ತನಿಖೆ ನಡೆಸಲಿ, ಅದನ್ನು ಬಿಟ್ಟು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳನ್ನು ವಿಚಾರಣೆಗೆ ಕರೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ರೀತಿ ಮಾಧ್ಯಮಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವುದು ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲಿಲ್ಲ" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗುತ್ತಿಗೆದಾರರು ತಮ್ಮ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಆಗಿಲ್ಲ ಎಂದು ರಾಜ್ಯಪಾಲರಿಗೆ ದೂರು ನೀಡಿದರೆ ಅವರ ವಿರದ್ಧವೂ ಕೇಸ್ ದಾಖಲಿಸಲಾಗುತ್ತಿದೆ. ನಮ್ಮ ಅವಧಿಯಲ್ಲಿಯೂ ಗುತ್ತಿಗೆದಾರರು ಆರೋಪ ಮಾಡಿದ್ದರು, ನಾವು ಇದೇ ರೀತಿ ನಡೆದುಕೊಂಡಿದ್ದೇವಾ?, ರಾಜ್ಯಪಾಲರಿಗೂ ಗೌರವ ಇಲ್ಲವೇ ?, ಗುತ್ತಿಗೆದಾರರಿಗೆ ಒಂದು ಸಂಘ ಇದೆ. ಅವರು ಕೆಲಸ ಮಾಡಿದ್ದು, ರಾಜ್ಯಪಾಲರು ಮತ್ತು ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ನಿಮ್ಮ ವಿರುದ್ಧ ಧ್ವನಿ ಎತ್ತಿದರೆ ಅವರ ವಿರುದ್ದ ಕೇಸ್ ಹಾಕುತ್ತೀರಿ, ನಿಮ್ಮ ವಿರುದ್ದ ಯಾರೂ ಧ್ವನಿ ಎತ್ತಬಾರದು ಅನ್ನುವ ಧೋರಣೆ ತಾಳುತ್ತಿದ್ದೀರಿ, ಅದನ್ನು ನಾವು ಖಂಡಿಸುತ್ತೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ : Bommai : ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡ್ತಿಲ್ಲ, ರೈತರ ಹಿತ ಕಾಯುತ್ತಿದ್ದೇವೆ- ಬೊಮ್ಮಾಯಿ
ನಂತರ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್, "ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಾರ್ಯಕರ್ತರನ್ನು ರಾಜ್ಯದಿಂದ ಹುಡುಕಿ ಹುಡುಕಿ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಮಾಧ್ಯಮದವರಿಗೂ ಸುದ್ದಿಗಳ ಮೂಲದ ದಾಖಲೆ ಕೇಳಿ ಕಿರುಕುಳ ಕೊಡುತ್ತಿದ್ದಾರೆ. ಗುತ್ತಿಗೆದಾರರು ರಾಜ್ಯಪಾಲರಿಗೆ ಪತ್ರ ಕೊಟ್ಟರೆ ರಾಜ್ಯಪಾಲರಿಗೆ ಏಕೆ ಪತ್ರ ಕೊಟ್ಟಿರಿ ಎಂದು ಪ್ರಶ್ನಿಸುತ್ತಾರೆ. ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರು, ಅವರಿಗೆ ಪತ್ರ ಕೊಟ್ಟಿದ್ದಕ್ಕೆ ಗುತ್ತಿಗೆದಾರರ ವಿರುದ್ಧ ಗುಂಡಾಗಿರಿ ಮಾಡುತ್ತಿದ್ದಾರೆ, ಬಿಜೆಪಿ ಅವರಿದ್ದಾಗ ಏಕೆ ಪತ್ರ ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ನಾವು ಒಂದು ದಿನವೂ ಬಾಕಿ ಬಿಲ್ಲ್ ಅನ್ನು ನಿಲ್ಲಿಸಿಲ್ಲ, ಕಾಂಗ್ರೆಸ್ ಸರ್ಕಾರ ಇದ್ದಾಗ ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಹಣವನ್ನು ಬಿಟ್ಟು ಹೋಗಿತ್ತು" ಎಂದರು.
"ನಮ್ಮ ಸರ್ಕಾರ ಬಂದಾಗ ನಾವು ಸೀನಿಯಾರಿಟಿ ಆಧಾರದಲ್ಲಿ ಬಿಡುಗಡೆ ಮಾಡಿದ್ದೇವೆ, ಪಾಲಿಕೆಯಲ್ಲೂ ಮತ್ತು ಇಲಾಖೆಗಳಲ್ಲೂ ಬಾಕಿ ಬಿಲ್ಲುಗಳನ್ನು ಪಾವತಿ ಮಾಡಿದ್ದೇವೆ. ಪೆಂಡಿಂಗ್ ಬಿಲ್ ಇಟ್ಟಿದ್ದು ಕಾಂಗ್ರೆಸ್ನವರು ನಮ್ಮ ಕಾಲದಲ್ಲಿ ಯಾವುದೇ ಪೆಂಡಿಂಗ್ ಬಿಲ್ ಇಟ್ಟಿಲ್ಲ, ಈಗ ಶೇಕಡಾ 55 ರಷ್ಟು ಕಮಿಷನ್ ಬೇಕು ಎಂದು ಕಾಂಗ್ರೆಸ್ ನವರು ಗುತ್ತಿಗೆದಾರರಿಗೆ ಧಮ್ಕಿ ಹಾಕುವ ಪ್ರವೃತ್ತಿ ಮಾಡುತ್ತಿದ್ದಾರೆ ಅದರ ವಿರುದ್ಧ ಯಡಿಯೂರಪ್ಪನವರ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ" ಎಂದರು.