ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದ ದೇವಸ್ಥಾನಗಳಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ. ರಾಜ್ಯದ ದೇವಸ್ಥಾನಗಳಲ್ಲಿ ಇ- ಹುಂಡಿ ವ್ಯವಸ್ಥೆ ಜಾರಿಗೆ ತರಲು ಸರ್ಕಾರದ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎ ವರ್ಗದ ದೇವಾಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡುತ್ತೇವೆ. ಬಳಿಕ ಹಂತ ಹಂತವಾಗಿ ಎಲ್ಲ ಎ ದರ್ಜೆಯ ದೇವಸ್ಥಾನಗಳಲ್ಲಿ ಇ-ಹುಂಡಿ ಅಳವಡಿಲು ಚಿಂತನೆ ಇದೆ ಎಂದು ತಿಳಿಸಿದರು.
ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಇ-ಹುಂಡಿಯ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಹಲವು ವರ್ಷಗಳಿಂದ ಇ-ಹುಂಡಿ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಪ್ರಾಯೋಗಿಕವಾಗಿ ಕೆಲ ದೇವಾಲಯಗಳಲ್ಲಿ ಇ-ಹುಂಡಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಬಳಿಕ ಎ ವರ್ಗದ ದೇವಾಲಯಗಳಲ್ಲಿ ಇ-ಹುಂಡಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಆ ಮೂಲಕ ಭಕ್ತಾಧಿಗಳಿಗೆ ಸುಲಭವಾಗಿ ಸೇವೆಗಳು ಲಭ್ಯವಾಗಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.
ಇ-ಹುಂಡಿ ವಿಶೇಷತೆ ಏನು?
- ದೇವಸ್ಥಾನಗಳಲ್ಲಿ ಎಟಿಎಂ ಮಾದರಿಯ ಇ-ಹುಂಡಿ ಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತದೆ.
- ಭಕ್ತರು ನೀಡುವ ಕಾಣಿಕೆಯನ್ನು ನೇರವಾಗಿ ಇ-ಹುಂಡಿಗೆ ಹಾಕಬಹುದಾಗಿದೆ.
- ಕಾಣಿಕೆ ನಿಡುವುದಕ್ಕೆ ಯಾವುದೇ ವ್ಯಕ್ತಿಗಳ ಅವಶ್ಯಕತೆ ಇರುವುದಿಲ್ಲ.
- ಭಕ್ತಾಧಿಗಳು ಇ-ಹುಂಡಿಗೆ ಕಾಣಿಕೆ ಹಾಕಿದರೆ, ನಿಮ್ಮ ಹೆಸರು ಸಮೇತ ಮಾಹಿತಿಯ ರಸೀದಿ ತಕ್ಷಣ ಲಭ್ಯವಾಗುತ್ತದೆ. ಕಾಣಿಕೆ ಮೊತ್ತದ ವಿವರ ಸ್ಲಿಪ್ನಲ್ಲಿ ತಕ್ಷಣವೇ ಲಭ್ಯವಾಗಲಿದೆ.
- ಭಕ್ತರು ಇ-ಹುಂಡಿಯಲ್ಲಿ ಹಾಕಿದ ಹಣ ನೇರವಾಗಿ ದೇವಸ್ಥಾನ ಅಕೌಂಟ್ಗೆ ಜಮೆ ಆಗುತ್ತದೆ. ಸಂಜೆ ಜಮೆಯಾಗಿರುವ ಹಣದ ಮಾಹಿತಿ ದೇವಸ್ಥಾನದ ಅಕೌಂಟ್ ಇರುವ ಬ್ಯಾಂಕ್ಗೆ ಸಿಗಲಿದೆ.
- ಇ-ಹುಂಡಿಯ ಮೂಲಕ ವಿವಿಧ ಸೇವೆಗಳನ್ನು ನಿಂತಲ್ಲೆ ಬುಕ್ ಮಾಡಿಸಬಹುದು.
- ಇ- ಹುಂಡಿ ಮೂಲಕ ಹಣ ಕಟ್ಟಿ, ನಿಮಗೆ ಬೇಕಾದ ವಿಶೇಷ ಸೇವೆಗಳ ರಸೀದಿ ಪಡೆದು, ದೇವಸ್ಥಾನಗಳಲ್ಲಿ ಪೂಜೆ ಮಾಡಿಸಬಹುದಾಗಿದೆ.