ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2022-23ರವರೆಗೆ ಪ್ರಮುಖ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಯನ್ನು ನಡೆಸಲು ನಾಲ್ಕು ಪರಿಣಿತರ ತನಿಖಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿತ್ತು. ಆದರೆ ಇದನ್ನು ರಾಜ್ಯ ಸರ್ಕಾರವು ರದ್ದುಪಡಿಸಿದೆ.
ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿ, ಕೇಂದ್ರ/ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ/ ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿ, ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿ, 30 ದಿನಗಳಲ್ಲಿ ವರದಿ ಒಪ್ಪಿಸುವಂತೆ ಆದೇಶಿಸಲಾಗಿತ್ತು.
ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಲು ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹಾನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ, ಸರ್ಕಾರ ಆದೇಶಿಸಿತ್ತು. ಬಿಬಿಎಂಪಿ ಕಾಮಗಾರಿಗಳು ಇದರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ನಾಲ್ಕು ಸಮಿತಿಗಳನ್ನು ರದ್ದುಪಡಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಆದೇಶ ಹೊರ ಬಂದ ನಂತರ ನಾಲ್ಕು ಸಮಿತಿಗಳನ್ನು ಸರ್ಕಾರ ರದ್ದುಪಡಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಅಕ್ರಮದ ಕುರಿತು ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹಾನ್ ದಾಸ್ ನೇತೃತ್ವದ ಆಯೋಗಕ್ಕೆ ದೂರುಗಳನ್ನು ನೀಡಬೇಕು ಎಂದು ಸರ್ಕಾರ ಇದೀಗ ಆದೇಶದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಬೆಂಗಳೂರು ಅಕ್ರಮ ಬಡಾವಣೆಗಳ ಬಗ್ಗೆ ಸಮಿತಿ ರಚಿಸಿ, ವರದಿ ಬಂದ ಬಳಿಕ ಸೂಕ್ತ ಕ್ರಮ: ಡಿಸಿಎಂ ಡಿಕೆಶಿ