ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಸಾರಿಗೆ ನೌಕರರು ಮುಷ್ಕರಕ್ಕೆ ಸಜ್ಜಾಗುತ್ತಿದ್ದು, ಸದ್ಯ ಆ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಕೊಕ್ಕೆ ಹಾಕಿದೆ. ಕಳೆದ ಮುಷ್ಕರಕ್ಕಿಂತ ಈ ಸಲ ನೌಕರರ ಕುಟುಂಬದವರು ಬೀದಿಗಿಳಿದು ಪ್ರತಿಭಟಿಸಲು ರೂಪುರೇಷೆ ಸಿದ್ಧಪಡಿಸಿಕೊಳ್ಳತ್ತಿದ್ದರು. ಜುಲೈ ಮೊದಲ ವಾರ ಸಭೆ ನಡೆಸಿ, ಮುಷ್ಕರದ ದಿನಾಂಕ ನಿಗದಿ ಮಾಡಲು ಸಜ್ಜಾಗಿದ್ದರು.
ಸರ್ಕಾರವೂ ಕೊಟ್ಟ ಮಾತಿನಂತೆ ನಡೆದುಕೊಂಡು ಆರನೇ ವೇತನ ಆಯೋಗ ಜಾರಿ ಮಾಡಬೇಕು. ಮುಷ್ಕರದಲ್ಲಿ ಭಾಗಿಯಾದವರನ್ನ ವರ್ಗಾವಣೆ, ಅಮಾನತು ಮಾಡಲಾಗಿದ್ದು, ಕೆಲಸಕ್ಕೆ ಅವ್ರನ್ನ ತೆಗೆದುಕೊಂಡಿಲ್ಲ. ಬಾಕಿ ಸಂಬಳ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.
ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ಧರಾಗುತ್ತಿರುವ ಸುಳಿವು ಸಿಕ್ಕ ಬೆನ್ನಲ್ಲೇ, ಸರ್ಕಾರ ಸಾರಿಗೆ ನೌಕರರಿಗೆ ಶಾಕ್ ನೀಡಿದೆ. ಮುಷ್ಕರ ಮಾಡದಂತೆ ಆದೇಶ ಹೊರಡಿಸಿದ್ದು, ಅಗತ್ಯ ಸೇವೆಗಳ ಮುಷ್ಕರವನ್ನ ನಿಷೇಧಿಸಿದೆ. ಜುಲೈ ಒಂದರಿಂದ, ಡಿಸೆಂಬರ್ ಅಂತ್ಯದವರೆಗೆ ಯಾವುದೇ ನೌಕರರು ಮುಷ್ಕರವನ್ನ ನಡೆಸುವಂತಿಲ್ಲ ಎಂದು ಸೂಚಿಸಿದೆ.
ಸದ್ಯ ಕೋವಿಡ್ ನಿಂದ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಆದ್ದರಿಂದ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯ 3ರ ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಅಡಿ ಬರುವ ನೌಕರರು ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದೆ.