ಬೆಂಗಳೂರು: ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವದ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಎರಡು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮಂಗಳವಾರ ಟೆಕ್ ಸಂಸ್ಥೆ ಮೆಟಾದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿತು.
ಮೆಟಾ ಜೊತೆಗಿನ ಈ ಪಾಲುದಾರಿಕೆಯ ಮೂಲಕ ಕರ್ನಾಟಕ ಸರ್ಕಾರವು 2025ರ ವೇಳೆಗೆ 1 ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು AR/VR ಕೌಶಲ್ಯಗಳಲ್ಲಿ ತರಬೇತಿ ನೀಡಲು ಯೋಜಿಸಿದೆ. ಆನ್‌ಲೈನ್ ಸುರಕ್ಷತಾ ಉಪಕ್ರಮದ ಅಡಿಯಲ್ಲಿ ರಾಜ್ಯಾದ್ಯಂತ 100 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಯುವಕರು (18-24 ವರ್ಷಗಳು) ಡಿಜಿಟಲ್ ಜಾಗೃತಿ ತರಬೇತಿ ಪಡೆಯಲಿದ್ದಾರೆ. ಡಿಜಿಟಲ್ ಸುರಕ್ಷತೆಯಲ್ಲಿನ ಹೊಸ ಟ್ರೆಂಡ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಕಾರ್ಯಕ್ರಮದ ಉದ್ದೇಶ. ಮೆಟಾ, ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನಿಯೋಜಿಸಲಿದೆ.
ಡಿಜಿಟಲ್ ಪೌರತ್ವ ಉಪಕ್ರಮವು ಐಟಿಬಿಟಿ ಸಚಿವಾಲಯ ಮತ್ತು ಮೆಟಾ ನಡುವಿನ ಜಂಟಿ ಕಾರ್ಯಕ್ರಮವಾಗಿದ್ದು, ವಿವಿಧ ಸರ್ಕಾರಿ ಇಲಾಖೆಗಳಾದ್ಯಂತ ಮಾಹಿತಿ ಸೇವೆಗಳನ್ನು ತಲುಪಿಸಲು ವಾಟ್ಸ್‌ಆ್ಯಪ್ ಚಾಟ್‌ಬಾಟ್ ಅಭಿವೃದ್ಧಿಪಡಿಸಲಿದೆ. ಈ ಮೂಲಕ ನಾಗರಿಕ ಸಂವಹನಗಳನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ನಾಗರಿಕ ಜಾಗೃತಿಗಾಗಿ ಡಿಜಿಟಲ್ ಸುರಕ್ಷತಾ ಚಾಟ್‌ಬಾಟ್ ರಚಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾದಿಂದ ನೇರವಾಗಿ ಅಮೆಜಾನ್ ಶಾಪಿಂಗ್ ; ಬರಲಿದೆ ಹೊಸ ವೈಶಿಷ್ಟ್ಯ
ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಮೆಟಾ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಮುಂದಾಳತ್ವ ವಹಿಸುವುದು ಹಾಗೂ ಸುರಕ್ಷಿತ ಆನ್‌ಲೈನ್ ಬಳಕೆ ಬಗ್ಗೆ ಜನರಿಗೆ ತರಬೇತಿ ನೀಡುವುದು ಅತಿ ಅವಶ್ಯಕ. ಇಂದಿನ ಯುಗದಲ್ಲಿ ಆನ್‌ಲೈನ್ ಸುರಕ್ಷತೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಿದ್ದು, ಗೇಮಿಂಗ್ ಮತ್ತು AIಗಾಗಿ ಮೆಟಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರವು ಯೋಜಿಸಿದೆ. ಈ ಮೂಲಕ ಡೀಪ್‌ಫೇಕ್‌ಗಳ ತಪ್ಪು ಮಾಹಿತಿಯನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾದಲ್ಲಿ ನಿಮ್ಮ ಇಂಟರ್ನೆಟ್ ಜಾಲಾಟ ಟ್ರ್ಯಾಕ್ ಮಾಡದಂತೆ ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಎಆರ್/ವಿಆರ್ ಮತ್ತು ಅವುಗಳ ಅಪ್ಲಿಕೇಶನ್‌ಗಳಿಂದಾಗಿ ಭವಿಷ್ಯದಲ್ಲಿ ತಂತ್ರಜ್ಞಾನಗಳು, ಉದ್ಯೋಗ ಅವಕಾಶಗಳು, ಹೊಸ ವ್ಯವಹಾರ ಪ್ರಾರಂಭಿಸಲು, ಉದ್ಯಮಶೀಲತೆಗಾಗಿ ಅವಕಾಶಗಳನ್ನು ತೆರೆಯಲಿದೆ. ಡಿಜಿಟಲ್ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಅವರ ಉದ್ಯೋಗವನ್ನು ಹೆಚ್ಚಿಸಲು ಸರ್ಕಾರವು ಸಮಗ್ರ ಯೋಜನೆ ಹೊಂದಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾಗಾಗಿ 2 ಹೊಸ AI ವಿಡಿಯೋ ಎಡಿಟಿಂಗ್ ಸಾಧನ ಪರಿಚಯಿಸಿದ ಮೆಟಾ