ಬೆಂಗಳೂರು: ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಪಕೋಡಾ ಬಿಜೆಪಿ ಸರ್ಕಾರ ಎಂದು ಆರೋಪ ಮಾಡಿರುವ ರಾಜ್ಯ ಕಾಂಗ್ರೆಸ್, ಯುವಕರಿಗೆ ಸಿಗಬೇಕಾದ ಉದ್ಯೋಗದಲ್ಲಿ ವಂಚನೆ ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಪಕ್ಷವು, ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ನೋಟ್ ಬ್ಯಾನ್, ಗಬ್ಬರ್ ಸಿಂಗ್ ಟ್ಯಾಕ್ಸ್, ಕೊರೊನಾ ನಿರ್ವಹಣೆಯಲ್ಲಿ ವೈಫಲ್ಯ, ಅವೈಜ್ಞಾನಿಕ ಲಾಕ್ ಡೌನ್ ಇವೆಲ್ಲವೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವ ಸಮುದಾಯವನ್ನು ಉದ್ಯೋಗ ವಂಚಿತರನ್ನಾಗಿಸಲು ಪ್ರಯೋಗಿಸಿದ ಅಸ್ತ್ರಗಳು. ಉದ್ಯೋಗ ಸೃಷ್ಟಿಸುವುದಿರಲಿ, ಇದ್ದ ಉದ್ಯೋಗವನ್ನೂ ಕಿತ್ತುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸುದ್ದಿಯನ್ನೂ ಓದಿ: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್
’’ನಿರುದ್ಯೋಗಂ ಬಿಜೆಪಿ ಲಕ್ಷಣಂ‘‘ ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ಇಲ್ಲ ಎಂದು ಕರ್ನಾಟಕದ ಓಲಾ ಕಂಪನಿ ತಮಿಳುನಾಡಿನಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಪೆಗಟ್ರಾನ್, ಟಾಟಾ ಸಮೂಹ ಬಂಡವಾಳ ಹೂಡಿಕೆ ಮಾಡಲು ನಿರಾಕರಿಸಿವೆ. ರಫೆಲ್ ಒಪ್ಪಂದವನ್ನೂ ಹೆಚ್.ಎ.ಎಲ್. ಗೆ ನೀಡಲಿಲ್ಲ. ರಾಜ್ಯದ ಯುವಕರಿಗೆ ಬಿಜೆಪಿ ದ್ರೋಹ ಬಗೆದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.