ಬೆಂಗಳೂರು: ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಭವನದಿಂದ ಸಿಎಂ ಅವರ ರೇಸ್ ಕೋರ್ಸ್ ನಿವಾಸಕ್ಕೆ ಮೆರವಣಿಗೆಯಲ್ಲಿ ತೆರಳಲು ಯತ್ನಿಸಿದ ಕೈ ನಾಯಕರು ಹಾಗೂ ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ಪೊಲೀಸರು ತಡೆದು ವಶಕ್ಕೆ ಪಡೆದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್, ಮಾಜಿ ಶಾಸಕ ಪ್ರಿಯಕೃಷ್ಣ, ಮಾಜಿ ಮೇಯರ್ ಪದ್ಮಾವತಿ, ಮಂಜುನಾಥ್ ರೆಡ್ಡಿ ಸೇರಿದಂತೆ ಮಾಜಿ ಕಾರ್ಪೊರೇಟರ್ಗಳು ಭಾಗಿಯಾಗಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
'ಈ ಸರ್ಕಾರಕ್ಕೆ ಅಧಿಕಾರ ನಡೆಸೋಕೆ ಬರಲ್ಲ': ರಾಮಲಿಂಗಾ ರೆಡ್ಡಿ ಮಾತನಾಡಿ, ಎರಡು ವರ್ಷದಲ್ಲಿ 16 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಕೋರ್ಟ್ ಮುಖೇನ ಹೇಳಿಸಿಕೊಂಡು ಕೆಲಸ ಮಾಡುವ ಪರಿಸ್ಥಿತಿ ಹಿಂದೆ ಯಾವಾಗಲೂ ಬಂದಿಲ್ಲ. ಈ ಸರ್ಕಾರಕ್ಕೆ ಕೋರ್ಟ್ ರಸ್ತೆ ಗುಂಡಿ ಮುಚ್ಚೋಕೆ ಛೀಮಾರಿ ಹಾಕ್ತಿದೆ. ಇವರಿಗೆ ಅಧಿಕಾರ ನಡೆಸೋಕೆ ಬರಲ್ಲ, ಕೆಲಸ ಮಾಡುವುದಕ್ಕೂ ಬರಲ್ಲ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಿಂಗಳಿಗೆ ಒಮ್ಮೆ ಸಿಟಿ ರೌಂಡ್ಸ್ ಹೋಗ್ತಿದ್ರು. ನಾನು ಉಸ್ತುವಾರಿ ಆಗಿದ್ದಾಗ ವಾರದಲ್ಲಿ ಮೂರು ದಿನ ರೌಂಡ್ಸ್ ಮಾಡ್ತಿದ್ದೆ. ನಾವು ಅಧಿಕಾರದಲ್ಲಿ ಇದ್ದಾಗಲೂ ಮಳೆ ಬರ್ತಿತ್ತು. ಆದರೆ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ಕೆಲಸ ಮಾಡ್ತಿದ್ವಿ ಎಂದು ಅವರು ಕಿಡಿಕಾರಿದರು.
ದಿನೇಶ್ ಗುಂಡೂರಾವ್ ಹೇಳಿದ್ದೇನು?: ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ರಸ್ತೆ ಗುಂಡಿ ಬೀಳಲು 40% ಕಮಿಷನ್ ಮೂಲ ಕಾರಣ. ಬೆಂಗಳೂರಲ್ಲಿ 60% ಕಮಿಷನ್ ಇದೆ. ಬೆಂಗಳೂರು ನಗರಕ್ಕೆ ಅನುದಾನ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಕೆಲಸಗಳು ಆಗಿಲ್ಲ. ಯಾವುದೇ ಫೈಲ್ ಮೂವ್ ಆಗ್ತಿಲ್ಲ. ಆಡಳಿತ ಯಂತ್ರ ಕುಸಿದಿದೆ. ಸರ್ಕಾರ ಬಂದು ಮೂರು ವರ್ಷ ಆಗಿದೆ. ಶಾಸಕರು, ಆಯುಕ್ತರನ್ನು ಕರೆದು ಸಭೆ ಮಾಡಿಲ್ಲ. ಸಿಎಂ ಅವ್ರಿಗೆ ಸಮಯ ಇಲ್ಲ. ಲೂಟಿ ಮಾಡೋದೇ ಅವರ ಉದ್ದೇಶ. ಗುಂಡಿ ಮುಚ್ಚೋಕೆ ಆಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೈ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ: ರಸ್ತೆ ಗುಂಡಿ ಮುಚ್ಚುವಂತೆ ಸರ್ಕಾರಕ್ಕೆ ಆಗ್ರಹ