ಬೆಂಗಳೂರು: ನಗರದ ಹಲವೆಡೆ ಪೇ-ಸಿಎಂ ಪೋಸ್ಟರ್ ಅಳವಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ವಿನೂತನ ಪ್ರತಿಭಟನೆೆ ನಡೆಸುತ್ತಿದೆ. ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪದ ಪ್ರಚಾರ ತಂತ್ರ ಇದಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.40ರಷ್ಟು ಕಮಿಷನ್ ಇಲ್ಲದೆ ಕೆಲಸ ಆಗುವುದೇ ಇಲ್ಲ ಎಂದು ಆರೋಪಿಸಿ ನಿರಂತರ ಹೋರಾಟ ನಡೆಸಿರುವ ಕೈ ಪಕ್ಷ ಈ ಮೂಲಕ ಇನ್ನೊಂದು ಹಂತದ ಹೋರಾಟದ ಅಸ್ತ್ರ ಪ್ರಯೋಗಿಸಿದೆ.
ಇಂದು ಬೆಳಗ್ಗೆ ಬೆಂಗಳೂರು ನಗರದಾದ್ಯಂತ ಕ್ಯೂಆರ್ ಕೋಡ್‌ನೊಂದಿಗೆ ಪೇ-ಸಿಎಂ ಪೋಸ್ಟರ್‌ಗಳು ಕಂಡು ಬಂದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ "ಪೇ-ಸಿಎಂ" ಶೀರ್ಷಿಕೆಯ ಪೋಸ್ಟರ್‌ಗಳನ್ನು ಬೆಂಗಳೂರು ನಗರದಾದ್ಯಂತ ಅಂಟಿಸಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದೆ.
ದೂರು ಸಲ್ಲಿಸಬಹುದು: ಸಿಎಂ ಭಾವಚಿತ್ರದೊಂದಿಗೆ ಅಳವಡಿಸಿರುವ ಈ ಕ್ಯೂಆರ್ ಕೋಡ್ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಅದು ಬಳಕೆದಾರರನ್ನು ದೂರುಗಳಿಗಾಗಿ ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ '40% ಕಮಿಷನ್ ಸರ್ಕಾರ' ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಸಾರ್ವಜನಿಕರು ನೇರವಾಗಿ ಈ ಮೂಲಕವೂ ಕಾಂಗ್ರೆಸ್ ವೆಬ್ಸೈಟ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ಸರ್ಕಾರದ ಭ್ರಷ್ಟಾಚಾರದ ಕುರಿತು ತಮ್ಮ ಅನಿಸಿಕೆಗಳನ್ನು ಸಹ ಹಂಚಿಕೊಳ್ಳಬಹುದಾಗಿದೆ.
ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಶೇ.40 ಕಮಿಷನ್ ದರ ಹೇಗೆ ರೂಢಿಯಾಗಿದೆ ಎಂಬುದನ್ನು ಎತ್ತಿ ತೋರಿಸಲು ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕರ ಗಮನ ಸೆಳೆಯುವ ನಿಟ್ಟಿನಲ್ಲಿ ಇದೊಂದು ವಿಭಿನ್ನ ಪ್ರಯತ್ನವಾಗಿದೆ. ತಮಗೆ ಇದರಲ್ಲಿ ಯಶಸ್ಸು ಸಿಗುವ ವಿಶ್ವಾಸ ಇದೆ ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಬಾಂಬ್ ತಯಾರಿಸಿ ಪ್ರಾಯೋಗಿಕ ಸ್ಫೋಟಕ್ಕೆ ತುಂಗಾ ನದಿ ಬಳಸಿಕೊಂಡ ಶಂಕಿತ ಉಗ್ರರು!