ಬೆಂಗಳೂರು : ಇದು ನಮ್ಮ ಭಾರತ ದೇಶವೇ ಎನ್ನುವ ಅನುಮಾನ ಪ್ರತಿಯೊಬ್ಬರಿಗೂ ಮೂಡುವ ರೀತಿಯ ದಿನಗಳು ನಿತ್ಯವೂ ಗೋಚರಿಸುತ್ತಿವೆ ಎಂದು ಅಖಿಲ ಭಾರತ ಅಲ್ಪಸಂಖ್ಯಾತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ಅಭಿಪ್ರಾಯಪಟ್ಟರು.
ನಗರದ ಅರಮನೆ ಮೈದಾನ ನಲಪಾಡ್ ಪೆವಿಲಿಯನ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜವಾಹರ್ ಲಾಲ್ ನೆಹರು ಹಾಗೂ ಮಹಾತ್ಮ ಗಾಂಧಿ ಅವರಂತಹ ವ್ಯಕ್ತಿಗಳು ಹೋರಾಟ ನಡೆಸಿ ಗಳಿಸಿಕೊಟ್ಟಿದ್ದ ಸ್ವಾತಂತ್ರ್ಯದಿಂದ ಬೆಳೆದು ಬಂದಿದ್ದ ದೇಶ ಇಂದು ಸಾಕಷ್ಟು ಬದಲಾಗಿದೆ. ನನಗೂ ದೇಶದ ಜೊತೆ ಕೈಜೋಡಿಸಿ ನಿಲ್ಲಬೇಕೆಂದರೆ ಕಾಂಗ್ರೆಸ್ ಜೊತೆ ಕೈಜೋಡಿಸಬೇಕು. ಈ ಮೂಲಕ ದೇಶ ರಕ್ಷಣೆಗೆ ಕಟಿಬದ್ಧರಾಗಬೇಕು.
ಕಳೆದ 70 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕೆ ಏನನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಕೇಳುತ್ತಿದ್ದಾರೆ. ನಾವು ಏನನ್ನ ಕೊಟ್ಟಿದ್ದೇವೆ ಎನ್ನುವುದನ್ನು ಅವರಿಗೆ ತಿಳಿ ಹೇಳುವ ಕಾರ್ಯ ಮಾಡಬೇಕಿದೆ. ನಮ್ಮ ಸಾಧನೆಯನ್ನು ಅವರಿಗೆ ತಿಳಿಸಬೇಕಿದೆ. ಈ ಭೂಮಿಯಲ್ಲಿ ನಮಗೆ ಹಕ್ಕು ಇದೆ, ನಾವು ಇಲ್ಲಿ ಬಾಳುತ್ತೇವೆ. ಇದು ನಮ್ಮ ದೇಶ ಎನ್ನುವುದನ್ನು ಬಿಜೆಪಿಯವರಿಗೆ ತಿಳಿಸಬೇಕಿದೆ. ಇಷ್ಟು ದಿನ ಇದನ್ನು ತಿಳಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ ಎಂದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಸಾಕಷ್ಟು ಅಧಿಕಾರ ಹಾಗೂ ಅವಕಾಶಗಳನ್ನು ನೀಡಿದೆ. ಸಾಕಷ್ಟು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಲು ಅವಕಾಶ ನೀಡಿದೆ. ಇಂದು ದೇಶ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಕೇವಲ ಬಾಯಿಗೆ ಬಂದಂತೆ ಮಾತನಾಡುವುದರಿಂದ ಸಾಧನೆ ಅಸಾಧ್ಯ. ಉತ್ತರಪ್ರದೇಶದಲ್ಲಿ ಅಮಾಯಕರ ಸಾವನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಸಂದರ್ಭ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಮಾತ್ರವೇ ಅಮಾಯಕರ ಪರವಾಗಿ ದನಿ ಎತ್ತಿದರು.
ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅಂತವರ ಮರ್ಜಿಯಿಂದ ಈ ದೇಶ ನಡೆಯುತ್ತಿಲ್ಲ. ಫ್ಯಾಸಿಸ್ಟ್ ಭಾವನೆಯೊಂದಿಗೆ ದೇಶವನ್ನು ಮುನ್ನಡೆಸಲು ಯತ್ನಿಸುತ್ತಿರುವ ಅವರಿಗೆ ನಾವು ಸರಿಯಾದ ಉತ್ತರ ನೀಡಬೇಕಿದೆ. ನಾವು ಸದಾ ಕಾಂಗ್ರೆಸ್ ಜೊತೆಯಲ್ಲೇ ಇದ್ದೇವೆ. ಅದು ಬದಲಾಗಿದೆ ಎಂಬ ಭಾವನೆಯನ್ನು ಮೂಡಿಸುವ ಕಾರ್ಯ ದೇಶದಲ್ಲಿ ನಡೆಯುತ್ತಿದೆ.
ಆದರೆ, ಪ್ರತಿಯೊಬ್ಬರೂ ಸತ್ಯದ ಸಾಮರ್ಥ್ಯವನ್ನು ಅರಿಯುವ ಕಾರ್ಯ ಮಾಡಬೇಕು. ಸಣ್ಣಪುಟ್ಟ ಪಕ್ಷಗಳು ಬಂದು ನಾವು ನಿಮ್ಮ ಜೊತೆ ಇದ್ದೇವೆ ಹಾಗೂ ಹೋರಾಡುತ್ತೇವೆ ಎಂದು ಹೇಳಿದಾಗ ಅವರ ಮಾತನ್ನು ನಂಬಿ ಮರುಳಾಗಬೇಡಿ. ಕಾಂಗ್ರೆಸ್ ನಮ್ಮ ಜೊತೆಗಿದೆ ಹಾಗೂ ರಾಹುಲ್ ಗಾಂಧಿ ನಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರಲ್ಲಿ ಕೇವಲ ಮುಸಲ್ಮಾನರ ಮಾತ್ರವಿಲ್ಲ. ಇನ್ನು ಆರು ಧರ್ಮದವರು ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಿಗೆ ಆಗುವ ಅನ್ಯಾಯ ಈ ಎಲ್ಲ ಧರ್ಮೀಯರಿಗೂ ಆಗಲಿದೆ. ಆದ್ದರಿಂದ ಹೊಸದಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಅಬ್ದುಲ್ ಜಬ್ಬಾರ್ ಅವರು ಕರ್ನಾಟಕದಲ್ಲಿ ಎಲ್ಲಾ ಧರ್ಮಿಯರನ್ನು ವಿಶ್ವಾಸಕ್ಕೆ ಪಡೆದು ಸಮಾಲೋಚಿಸಿ ಮುಂಬರುವ ದಿನಗಳಲ್ಲಿ ಎದುರಾಗುವ ಆತಂಕಗಳನ್ನು ವಿವರಿಸಬೇಕು.
ಉದ್ಯೋಗ ಸೃಷ್ಟಿಸುವ ಸಮುದಾಯ ನಿಮ್ಮದು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಮುಸ್ಲಿಂ ಸಮುದಾಯದವರು ನಮ್ಮ ಸಹೋದರರು, ಕಳೆದ ಚುನಾವಣೆಯಲ್ಲಿ ಸಮುದಾಯ ಒಗ್ಗಟ್ಟಾಗಿ ಮತದಾನ ಮಾಡಿದಕ್ಕೆ 79 ಜನ ಗೆದ್ದರು. ನಾವಿರುವುದು ನಿಮಗಾಗಿ. ನೀವಿರುವುದು ನಮಗಾಗಿ. ಮುಸ್ಲಿಂ ಮತ್ತು ದಲಿತರನ್ನ ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ.
ಎಚ್ಚರಿಕೆಯಿಂದ ಇರಿ, ಅವರ ಮಾತುಗಳ ಬಗ್ಗೆ. ಟಿಪ್ಪು ಜಯಂತಿ ಆಚರಣೆಗೆ ರಾಷ್ಟ್ರಪತಿಗಳು ಬಂದಿದ್ದರು. ಆ ಚರಿತ್ರೆ ಯಾರು ತೆಗೆದು ಹಾಕಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕೆಲವರು ಪಂಚರ್ ಹಾಕೋರು, ಎದೆ ಸೀಳಿದ್ರೆ ಒಂದು ಅಕ್ಷರ ಬರಲ್ಲ ಎಂದು ಹೇಳ್ತಾರೆ. ಅವರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಕಾಂಗ್ರೆಸ್ ಪಕ್ಷ ಮತ್ತು ಸಂವಿಧಾನ ನಿಮ್ಮನ್ನ ರಕ್ಷಣೆ ಮಾಡುತ್ತೆ ಎಂದರು.
ಕಾಂಗ್ರೆಸ್ ಒಬ್ಬರ ಪಕ್ಷವಲ್ಲ : ರಾಜ್ಯಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇವಲ ಒಬ್ಬರದ್ದಲ್ಲ. ಎಲ್ಲಾ ಧರ್ಮ ಸಮುದಾಯದ ಹಾಗೂ ವ್ಯಕ್ತಿಗಳ ಪಕ್ಷವಾಗಿದೆ. ಬಡವರು ಶಕ್ತರು ಅಸಹಾಯಕರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಪಕ್ಷವನ್ನು ಆಶ್ರಯಿಸಿದ್ದಾರೆ. ಅವರನ್ನ ಪೋಷಿಸುವ ಕಾರ್ಯವನ್ನು ಪಕ್ಷ ಮಾಡುತ್ತಾ ಬಂದಿದೆ.
ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂಬ ಪ್ರಶ್ನೆಯನ್ನು ಇಂದು ಕೆಲವರು ಕೇಳುತ್ತಿದ್ದಾರೆ. ಪಾರ್ಲಿಮೆಂಟ್‌ನಲ್ಲಿಯೂ ಸಾಕಷ್ಟು ಬಾರಿ ಇಂತಹ ಮಾತನ್ನು ನಾನು ಕೇಳಿದ್ದೇನೆ. ಆದರೆ, ಇಂದು ಸಂವಿಧಾನ ಇರದಿದ್ದರೆ ಅಥವಾ ಇಷ್ಟೊಂದು ವ್ಯವಸ್ಥಿತವಾಗಿ ದೇಶಕಟ್ಟುವ ಕಾರ್ಯ ಆಗದಿದ್ದರೆ ನರೇಂದ್ರ ಮೋದಿ ಹೇಗೆ ಪ್ರಧಾನಿಯಾಗುತ್ತಿದ್ದರು. ಅವರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅಧಿಕಾರವನ್ನು ನೀಡುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಪಕ್ಷ ಇದು. ಆದರೆ, ಕೆಲವರು 2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು ಅಂತಾ ಹೇಳುತ್ತಿದ್ದಾರೆ. ಅಂತಹ ವ್ಯಕ್ತಿ ಹೆಸರನ್ನು ಸಹ ನಾನು ಪ್ರಸ್ತಾಪಿಸಲು ಇಷ್ಟಪಡುವುದಿಲ್ಲ. ಅಲ್ಪಸಂಖ್ಯಾತರಲ್ಲಿ ಕೇವಲ ಮುಸ್ಲಿಮರು ಮಾತ್ರ ಇಲ್ಲ. ಇನ್ನು ಸಾಕಷ್ಟು ಮಂದಿ ಇದ್ದು ಅವರನ್ನು ಜೊತೆಯಾಗಿ ಕೊಂಡೊಯ್ಯುವ ಜವಾಬ್ದಾರಿ ಅಬ್ದುಲ್ ಜಬ್ಬಾರ್ ಅವರ ಮೇಲಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಮಹಮ್ಮದ್, ಧ್ರುವನಾರಾಯಣ್ ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.