ಬೆಂಗಳೂರು: ರಾಜ್ಯದ ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಏಪ್ರಿಲ್ 17ರಂದು ಮತದಾನ ನಡೆಯಲಿದೆ.
ನಾಳೆ ಮನೆ ಮನೆ ಪ್ರಚಾರ: ಅಭ್ಯರ್ಥಿಗಳು ನಾಳೆ ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದು, ಬೆಳಗಾವಿಯಲ್ಲಿ ಇಂದು ಬಿ.ಎಸ್ ಯಡಿಯೂರಪ್ಪ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ನಡೆಸಿದರು. ನಿನ್ನೆ ಕೂಡ ಮುಖ್ಯಮಂತ್ರಿ ಬಿಎಸ್ವೈ ವಿವಿಧ ಸ್ಥಳಗಳಲ್ಲಿ ಪ್ರಚಾರ ನಡೆಸಿ, ಮತದಾರರ ಮನಗೆಲ್ಲುವ ಕೆಲಸ ಮಾಡಿದ್ದಾರೆ.
ಮಸ್ಕಿಯಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟ್
ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ನಿಂದ ಬಸನಗೌಡ ತುರ್ವಿಹಾಳ ಸ್ಪರ್ಧೆ ಮಾಡಿದ್ರೆ ಬಿಜೆಪಿಯಿಂದ ಪ್ರತಾಪ್ಗೌಡ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಎಸ್.ಆರ್ ಪಾಟೀಲ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವರು ಪ್ರಚಾರ ನಡೆಸಿದ್ರೆ, ಬಿಜೆಪಿ ಪರ ಮುಖ್ಯಮಂತ್ರಿ ಬಿಎಸ್ವೈ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಡಿಸಿಎಂ ಗೋವಿಂದ್ ಕಾರಜೋಳ, ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದಾರೆ. ವಿಶೇಷವೆಂದರೆ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ತೆಲುಗು ಗಾಯಕಿ ಮಂಗ್ಲಿ (ಸತ್ಯವತಿ ರಾಠೋಡ್) ಹಾಡುಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿರುವುದು ಗಮನಾರ್ಹವಾಗಿದೆ.
ಬೆಳಗಾವಿಯಲ್ಲಿ ಬಿಜೆಪಿ ಭದ್ರಕೋಟೆಗೆ ಕೈ ಪ್ಲಾನ್
ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹಾಗೂ ಕಾಂಗ್ರೆಸ್ನಿಂದ ಮಾಲಾ ಬಿ.ನಾರಾಯಣರಾವ್ ಸ್ಪರ್ಧೆ ಮಾಡಿದ್ದು, ವಿವಿಧ ನಾಯಕರ ಮೂಲಕ ಪ್ರಚಾರ ನಡೆಸಿ ಮತದಾರರ ಮನ ಗೆಲ್ಲುವ ಕೆಲಸ ಮಾಡಿದ್ದಾರೆ. ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಸುರೇಶ್ ಅಂಗಡಿ ಪತ್ನಿ ಮಂಗಳಾ ಕಣಕ್ಕಿಳಿದಿದ್ದಾರೆ. ಈ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ.
ಈ ಮೂರು ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ. 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ರಾಜ್ಯದ ಬೈಎಲೆಕ್ಷನ್ ಜತೆಗೆ ಆಂಧ್ರದ ತಿರುಪತಿ ಲೋಕಸಭೆ ಕ್ಷೇತ್ರ ಹಾಗೂ 10 ರಾಜ್ಯಗಳಲ್ಲಿ 12 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯುತ್ತಿವೆ.