ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ದಾಖಲೆಯ ಬಜೆಟ್ ಮಂಡನೆಯನ್ನು ಮಂಡಿಸಿದ್ದು ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಈ ದೇಶದಲ್ಲಿ ಶತಶತಮಾನಗಳಿಂದ ಯಾವುದಾದರೊಂದು ನಾಡು ಶ್ರಮಿಸಿದ್ದರೆ ಅದು ಕರ್ನಾಟಕ ಎಂದು ಹೇಳಲು ನನಗೆ ಹೆಮ್ಮೆಯಿದೆ. ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್ ವರೆಗೆ ಈ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆಜೊತೆಗೇ ಎಳೆಯಲಾಗಿದೆ. ಈ ಘನ ಪರಂಪರೆಯನ್ನು ನಾನು ಎಂದಿನಂತೆ ಈ ಬಾರಿಯೂ ಮುಂದುವರೆಸಲು ಶ್ರಮಿಸಿದ್ದೇನೆ.
ಇದು ನಾನು ಮಂಡಿಸುತ್ತಿರುವ 14ನೆಯ ಆಯವ್ಯಯ ಪತ್ರ. ಮುಖ್ಯಮಂತ್ರಿಯಾಗಿ, ವಿತ್ತೀಯ ಹೊಣೆಯನ್ನು ಹೊತ್ತು ಮಂಡಿಸುತ್ತಿರುವ ಏಳನೆಯ ಬಜೆಟ್. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ. ನನ್ನ ಇಷ್ಟೂ ಆಯವ್ಯಯ ಪತ್ರಗಳ ಹಿಂದೆ ಯಾವ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ನಾಡಿನ ಶ್ರೇಷ್ಠ ಮನಸ್ಸುಗಳು ಬಯಸಿದ್ದವೋ ಅದನ್ನು ಈಡೇರಿಸಲೇಬೇಕೆನ್ನುವ ಉದ್ದೇಶ, ಬದ್ಧತೆಗಳು ಸ್ಪಷ್ಟವಾಗಿವೆ. ನಮ್ಮ ಪಕ್ಷದ ಧ್ಯೇಯೋದ್ದೇಶವೂ ಸಹ ಇದುವೇ ಆಗಿದೆ.
ನನ್ನ ಹಿಂದಿನ ಎಲ್ಲ ಆಯವ್ಯಯಗಳಲ್ಲಿ ʻಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಮೂಲಮಂತ್ರದ, ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನವಿದೆ ಎಂದು ʻಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?ʼ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖ ಮಾಡುತ್ತಾ ತಮ್ಮ ಬಜೆಟ್ ಆರಂಭಿಸಿದರು.
2023-24ನೇ ಸಾಲಿನಲ್ಲಿ 3,24,478 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಹಾಕಿಕೊಂಡಿರುವ ಗ್ಯಾರಂಟಿ ಯೋಜನೆಗಳ ಜಾರಿಗೆ ಹೆಚ್ಚಿನ ಅನುದಾನ ಬೇಕಿದ್ದರಿಂದ ಅಬಕಾರಿ ಸುಂಕವನ್ನು ಶೇ.20 ಹೆಚ್ಚಳ ಮಾಡುವ ಮೂಲಕ ಮದ್ಯದ ದರವನ್ನು ಹೆಚ್ಚಳ ಮಾಡಿದ್ದಾರೆ. ಅಲ್ಲದೇ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಸಹ ಏರಿಕೆ ಮಾಡುವ ಪ್ರಸ್ತಾಪ ಮಾಡಿದ್ದಾರೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನು 175% ರಿಂದ 185%ಗೆ ಹೆಚ್ಚಳ ಮಾಡಲಾಗಿದೆ. ರಾಜ್ಯದ ಎಲ್ಲ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಆಯ್ದ ವಾಹನಗಳ ವರ್ಗಗಳಿಗೆ ವಿಧಿಸುವ ತೆರಿಗೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಗ್ಯಾರಂಟಿ ಯೋಜನೆಗಳಿಂದ 1 ಕೋಟಿ 30 ಲಕ್ಷ ಕುಟುಂಬಗಳಿಗೆ ಸಹಾಯವಾಗಲಿದೆ. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂಪಾಯಿ ಅನುಕೂಲವಾಗಲಿದೆ. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ವಾರ್ಷಿಕವಾಗಿ 48 ಸಾವಿರದಿಂದ 60 ಸಾವಿರ ರೂಪಾಯಿಗಳ ಅನುಕೂಲವಾಗಲಿದೆ ಎಂದು ತಿಳಿಸಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿ 85,819 ಕೋಟಿ ರೂ. ಸಾಲ ಮಾಡಲು ನಿರ್ಧಾರಿಸಿದ್ದಾರೆ.
ತೆರಿಗೆ ಸಂಗ್ರಹ: ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕವನ್ನು ನೀಡಲು, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ಶೀಘ್ರದಲ್ಲಿ ಕಾರ್ಯೋನ್ಮುಖವಾಗಲಿವೆ. ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಇಂದಿನ ಬಜೆಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಮೂಲಕ 2023-24 ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಹೊಂದಿದ್ದಾರೆ.
ಅಬಕಾರಿ ಇಲಾಖೆಯಿಂದ 2023-24 ಸಾಲಿನಲ್ಲಿ 36,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಇಟ್ಟುಕೊಂಡರೆ, ಇದೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮೂಲಕ 25,000 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ. ಇನ್ನು ಮೋಟಾರು ಮತ್ತು ವಾಹನ ತೆರಿಗೆ ಮೂಲಕ 11,500 ಕೋಟಿ ರೂ. ಸಂಗ್ರಹದ ಗುರಿ ಇದ್ದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ 9,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ.
ಇದನ್ನೂ ಓದಿ: 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ಅಗತ್ಯ: ಸಿಎಂ