ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸುತ್ತಿದೆ. ಬರದ ಸಂದರ್ಭದಲ್ಲಿ ರಚನೆಯಾದ ಸರ್ಕಾರ ನೆರೆಹಾವಳಿ, ಸರ್ಕಾರ ಉಳಿಸಿಕೊಳ್ಳುವ ಅಗ್ನಿಪರೀಕ್ಷೆ, ಕೋವಿಡ್-19 ಮಹಾಮಾರಿ ಹೀಗೆ ಸಾಲು ಸಾಲು ಸವಾಲುಗಳಲ್ಲೇ ವರ್ಷವನ್ನು ಕಳೆಯುವಂತಾಯ್ತು. ಇದರ ನಡುವೆ ರಾಜ್ಯದ ಅಭಿವೃದ್ಧಿ ಕುಂಟುತ್ತಾ ಸಾಗಿದ್ದು, ಬರಿದಾದ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳುವ ಲೆಕ್ಕಾಚಾರದಲ್ಲೇ ಸಿಎಂ ಮುಳುಗಿ ಹೋಗುವಂತಾಗಿದೆ.
2019ರ ಜುಲೈ 26ರಂದು ಯಡಿಯೂರಪ್ಪ ರಾಜಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಒನ್ ಮ್ಯಾನ್ ಕ್ಯಾಬಿನೆಟ್ ಆಗಿದ್ದ ಬಿಎಸ್‌ವೈಗೆ ಮೊದಲು ಎದುರಾಗಿದ್ದೇ ನೆರೆ ಹಾವಳಿ. ಉತ್ತರ ಕರ್ನಾಟಕದಲ್ಲಿ ತಲೆದೂರಿದ ನೆರೆ ಪರಿಹಾರಕ್ಕೆ ಸ್ವತಃ ಸಿಎಂ ಮುಂದಾಗಿದ್ದರು. ಸಂಪುಟದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ರಾಜ್ಯವನ್ನು ಸುತ್ತಿ ನೆರೆ ಪರಿಹಾರ ಕಾರ್ಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಯಿತು. ಕೇಂದ್ರದ ನೆರವು ಸರಿಯಾಗಿ ಸಿಕ್ಕದೇ ರಾಜ್ಯದ ಬೊಕ್ಕಸದಿಂದಲೇ ಹಣವನ್ನು ವ್ಯಯಿಸಬೇಕಾಯಿತು. ನಂತರ ಕೇಂದ್ರ ಬಿಡುಗಡೆ ಮಾಡಿದ 1200 ಕೋಟಿ ಪರಿಹಾರ ರಾಜ್ಯದ ನಿರೀಕ್ಷೆಯನ್ನು ಹುಸಿಯಾಗಿಸಿದ್ದು, ರಾಜ್ಯವೇ ಬೊಕ್ಕಸವನ್ನು ಬರಿದುಮಾಡಿಕೊಂಡು ಜನರ ಮುಂದೆ ನೆರವಿಗೆ ಕೈಚಾಚಬೇಕಾಯಿತು.
ನಂತರ ಸಂಪುಟ ರಚನೆಯ ಸರ್ಕಸ್ ನಡೆಯಿತು. ನೆರೆ ಪರಿಹಾರ ಕಾರ್ಯದ ನಡುವೆಯಲ್ಲೇ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹಿಡಿದು ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ್ದರು. ಆಪ್ತರಿಗೆ ಸಿಎಂ ಮಣೆ ಹಾಕುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗುವಂತೆ ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿತ್ತು. ಗೆದ್ದ ಉಮೇಶ್ ಕತ್ತಿಗೆ ಅವಕಾಶ ನೀಡದೆ ಸೋತ ಲಕ್ಷ್ಮಣ ಸವದಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನವನ್ನು ಹೈಕಮಾಂಡ್ ಕರುಣಿಸಿತ್ತು. ಮೂವರು ಡಿಸಿಎಂಗಳನ್ನು ಒಳಗೊಂಡ 17 ಸಚಿವರು ಅಗಸ್ಟ್20 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಇನ್ನೂ ಅವಕಾಶ ಸಿಗದ ಆಕಾಂಕ್ಷಿಗಳಲ್ಲಿ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಸೇರಿದಂತೆ ಹಲವರು ಅಸಮಾಧಾನ ಹೊರಹಾಕಿದ್ದರು. ಅವರೆಲ್ಲರನ್ನೂ ಸಮಾಧಾನಪಡಿಸುವ ಮೂಲಕ ಯಡಿಯೂರಪ್ಪ ಸರ್ಕಾರವನ್ನು ಮುನ್ನಡೆಸಬೇಕಾಯಿತು. ಇದರ ನಡುವೆ ಸರ್ಕಾರ ರಚನೆಗೆ ಕಾರಣರಾಗಿದ್ದ ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಯಿತು. ಸ್ವತಃ ಮುಂದೆ ನಿಂತು ಯಡಿಯೂರಪ್ಪ ಬಿಜೆಪಿ ಸೇರಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಗೆ ಟಿಕೇಟ್ ಕೊಡಿಸಿದರು.
ಎಲ್ಲಾ 15 ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಿದ್ದರು. ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸುವ ಉಪ ಚುನಾವಣೆಯಲ್ಲಿ 12 ಸ್ಥಾನ ಗೆಲ್ಲುವ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಳ್ಳಲಾಯಿತು. ನಂತರ ಮತ್ತೆ ಸಂಪುಟ ವಿಸ್ತರಣೆಯ ಸರ್ಕಸ್ ನಡೆಸಬೇಕಾಯಿತು. ಬೇರೆ ಪಕ್ಷದಿಂದ ಬಂದವರಿಗೆ ಮಾತ್ರ ಅವಕಾಶ ನೀಡಿದರೆ ಹೇಗೆ? ಮೂಲ ಬಿಜೆಪಿಗರಿಗೂ ಅವಕಾಶ ನೀಡಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಮತ್ತೆ ಪಟ್ಟಿ ಹಿಡಿದು ಸಿಎಂ ದೆಹಲಿ ಪ್ರಯಾಣ ಬೆಳೆಸಿದ್ದರು. ನಂಬಿ ಬಂದಿದ್ದ ವಲಸಿಗರನ್ನು ಕೈಹಿಡಿಯಲೇಬೇಕಾದ ಅನಿವಾರ್ಯತೆಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟು ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡರು.
2ನೇ ಸಂಪುಟ ವಿಸ್ತರಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೆ ಗುರಿಯಾಗಿ ಕಾಂಗ್ರೆಸ್, ಜೆಡಿಎಸ್ ತೊರೆದು ಬಂದು ಉಪ ಚುನಾವಣೆಯಲ್ಲಿ ಗೆದ್ದವರಲ್ಲಿ 10 ಜನರಿಗೆ ಮಾತ್ರ ಅವಕಾಶ ನೀಡಲಾಯಿತು. 10 ಶಾಸಕರು 2020ರ ಫೆಬ್ರವರಿ 6 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಬಾರಿ ಮೂಲ ಬಿಜೆಪಿಯ ಯಾರಿಗೂ ಅವಕಾಶ ನೀಡಲಿಲ್ಲ. ಪಕ್ಷದಲ್ಲಿ ಅಸಮಾಧಾನ ಏಳುವ ಕಾರಣಕ್ಕೆ ವಲಸಿಗರ ಹೊರತು ಯಾರಿಗೂ ಅವಕಾಶ ಕಲ್ಪಿಸಲಿಲ್ಲ. ಇದರಿಂದ ಉಮೇಶ್ ಕತ್ತಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದರು. ಎರಡು ಮೂರು ಬಾರಿ ಭಿನ್ನಮತೀಯ ಚಟುವಟಿಕೆಯನ್ನೂ ನಡೆಸಿದ್ದರು. ವಿಧಾನಸಭೆ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಪ್ರತ್ಯೇಕ ಸಭೆ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಮಾರ್ಚ್ 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ಅವಧಿಯ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು. 2.37 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದರು. ಬಜೆಟ್ ಅಧಿವೇಶನದ ಚರ್ಚೆಯ ನಡುವೆ ರಾಜ್ಯಕ್ಕೂ ಕೊರೊನಾ ಕಾಲಿಟ್ಟಿತ್ತು. ಪರಿಣಾಮ ಬಜೆಟ್ ಅಧಿವೇಶನವನ್ನು ಅವಧಿಗೂ ಮೊದಲೇ ಮೊಟಕುಗೊಳಿಸಲಾಯಿತು. ಯಾವುದೇ ಚರ್ಚೆ ಇಲ್ಲದೇ ಈ ಬಾರಿಯ ಬಜೆಟ್‌ನ ವಿಧಾನಸಭೆ ಅಂಗೀಕರಿಸಿತು.
ಮಾರ್ಚ್ 8ರಂದು ರಾಜ್ಯದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ಗೆ ಕೊರೊನಾ ನಿಯಂತ್ರಣದ ಜವಾಬ್ದಾರಿ ನೀಡಿದರು. ಮಗಳ ಮದುವೆ ಕಾರ್ಯದಲ್ಲಿ ತೊಡಗಿದ್ದ ರಾಮುಲು ಬದಲಿಗೆ ಸುಧಾಕರ್ ಕೋವಿಡ್ ನಿಯಂತ್ರಣದ ಜವಾಬ್ದಾರಿ ನಿರ್ವಹಿಸಿದರು. ನಂತರ ಇದು ರಾಮುಲು ಹಾಗೂ ಸುಧಾಕರ್ ನಡುವೆ ಮನಸ್ತಾಪಕ್ಕೂ ಕಾರಣವಾಗಿ ವಿರೋಧ ಪಕ್ಷಗಳಿಗೆ ಆಹಾರವೂ ಆಯಿತು. ಸದನದಲ್ಲಿಯೇ ಈ ಬಗ್ಗೆ ಚರ್ಚೆಯಾಗಿ ಉತ್ತರ ನೀಡುವ ಸನ್ನಿವೇಶವನ್ನು ಸರ್ಕಾರ ಎದುರಿಸಬೇಕಾಯಿತು.
ಪರಿಸ್ಥಿತಿಯನ್ನು ಅರಿತ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಬಗ್ಗೆ ಮಾಧ್ಯಮಕ್ಕೆ ವಿವರ ನೀಡುವ ಜವಾಬ್ದಾರಿಯನ್ನು ಸಚಿವ ಸುರೇಶ್‌ಕುಮಾರ್‌ಗೆವಹಿಸಿ ಆರೋಗ್ಯ ಸಚಿವ ಶ್ರೀರಾಮುಲು ಅಧ್ಯಕ್ಷತೆಯ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ರಚಿಸಿದರು. ಡಿಸಿಎಂ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ಅಧಿಕಾರಕ್ಕೆ ಬಂದ ಮೊದಲ ನಾಲ್ಕು ತಿಂಗಳು ನೆರೆ ಪರಿಹಾರ ಕಾರ್ಯಾಚರಣೆ ಹಾಗೂ ನಂತರದ ಒಂದು ತಿಂಗಳನ್ನು ಉಪ ಚುನಾವಣೆಯಲ್ಲಿ ಕಳೆದ ಸರ್ಕಾರ ನಂತರ ಹೊಸ ವರ್ಷದ ಎರಡು ತಿಂಗಳನ್ನು ಸಂಪುಟ ವಿಸ್ತರಣೆಯಲ್ಲಿ ಕಳೆಯಿತು. ಸಂಪುಟ ವಿಸ್ತರಣೆಯಾಗಿ ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ರಾಜ್ಯದಲ್ಲಿ ಕೊರೊನಾ ಕಾಲಿಟ್ಟಿದ್ದು, ಕಳೆದ ನಾಲ್ಕು ತಿಂಗಳಿನಿಂದ ಕೇವಲ ಕೊರೊನಾ ನಿರ್ವಹಣೆಯೊಂದನ್ನೇ ಮಾಡುವಂತಾಗಿದೆ. ಅಧಿಕಾರ ಸಿಕ್ಕಾಗ ನೆರೆ, ವರ್ಷ ತುಂಬಿದಾಗ ಕೊರೊನಾ ಬರೆಯಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುವಂತಾಗಿದೆ.
ಗೋಲಿಬಾರ್ ಕಪ್ಪುಚುಕ್ಕೆ : ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ದೊಡ್ಡ ವಿವಾದ ಸೃಷ್ಟಿಸಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾದರು. ಇದು ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗಲೂ ಹಾವೇರಿಯಲ್ಲಿ ರೈತರೊಬ್ಬರ ಮೇಲೆ ಗೋಲಿಬಾರ್ ನಡೆದಿತ್ತು.
ಬಿಜೆಪಿ ಸರ್ಕಾರದ ಸಾಧನೆ :
ಸರ್ಕಾರ ರಚನೆಯಾಗಿ ಮೂರು ತಿಂಗಳಿನಲ್ಲೇ ನೇಕಾರರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಘೋಷಣೆ
ಕೃಷಿ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ
ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ ವಿಮೆ ಪಾವತಿ
ಸುಜಲಾಂ ಸುಫಲಾಂ ಕರ್ನಾಟಕ ಕೆರೆ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ
ಆಯುಷ್ಮಾನ್ ಕರ್ನಾಟಕ ಯೋಜನೆ
ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ
ನನ್ನ ಬೆಳೆ-ನನ್ನ ಹಕ್ಕು ಯೋಜನೆ
- ಸರ್ಕಾರದ ವೈಫಲ್ಯಗಳು:
ಲೋಕಾಯುಕ್ತ ಮರುಸ್ಥಾಪನೆ ನಿರ್ಧಾರ ಆಗಿಲ್ಲ
ಗೋಹತ್ಯೆ ನಿಷೇಧ ಕಾಯ್ದೆ ಮರುಜಾರಿ ಆಗಿಲ್ಲ
300ಅನ್ನಪೂರ್ಣ ಕ್ಯಾಂಟೀನ್ ಆರಂಭವಾಗಿಲ್ಲ
ಕೀರ್ತಿ ಆಯೋಗ ಸ್ಥಾಪನೆ ಆಗಿಲ್ಲ, ಸಕಾಲ ಕಾಯ್ದೆಗೆ ಮರುಜೀವ ಸಿಕ್ಕಿಲ್ಲ
ಸಾವಿರ ರೈತರಿಗೆ ಇಸ್ರೇಲ್ ಪ್ರವಾಸ ಭಾಗ್ಯದ ಘೋಷಣೆ ಈಡೇರಿಲ್ಲ
ಭಾಗ್ಯಲಕ್ಷ್ಮಿ ಬಾಂಡ್ 2 ಲಕ್ಷ ರೂ.ಗೆ ಹೆಚ್ಚಳ ಆಗಿಲ್ಲ
ನೆರೆ ಪರಿಹಾರ ನೀಡುವಲ್ಲಿ ವೈಫಲ್ಯ
ನಿರಾಶ್ರಿತರಿಗೆ ಸೂರು ನಿರ್ಮಿಸುವಲ್ಲಿ ಎಡವಟ್ಟು
ಸಮನ್ವಯತೆ ಕೊರತೆಯಿಂದ ಅಭಿವೃದ್ಧಿ ಕಾರ್ಯ ಕುಂಠಿತ
ಕೇಂದ್ರದ ಅನುದಾನ ತರುವಲ್ಲಿ ವಿಫಲ
ಸರ್ಕಾರ ಸ್ಥಿರತೆಗೆ ಮಾತ್ರ ಆದ್ಯತೆ
ಕುಮಾರಸ್ವಾಮಿ ಕಾಲದ ಬಡವರ ಬಂಧು ಯೋಜನೆ ನೆನೆಗುದಿಗೆ
ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತ
ಆರ್ಥಿಕ ಸ್ಥಿತಿ ಕುಸಿತ