ಬೆಂಗಳೂರು: ರಾಜ್ಯ ಬಿಜೆಪಿ ಮಹತ್ವದ ಕೋರ್ ಕಮೀಟಿ ಸಭೆಯು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಗರದ ಮಲ್ಲೇಶ್ವರಂನ ಪಕ್ಷ ಕಚೇರಿಯಲ್ಲಿ ನಡೆಯುತ್ತಿದ್ದು, ಮೂಲ ಬಿಜೆಪಿ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ಸಿಎಂ, ಈ ಕುರಿತು ಪಕ್ಷದ ಕೋರ್ ಕಮಿಟಿ ಸದಸ್ಯರ ಜೊತೆ ಮಾತುಕತೆ ನಡೆಸಲಿದ್ದಾರೆ. ಜೂನ್ ತಿಂಗಳಲ್ಲಿ ಪರಿಷತ್ ಮತ್ತು ರಾಜ್ಯಸಭೆಗೆ ವಿಧಾನಸಭೆಯಿಂದ ಚುನಾವಣೆ ನಡೆಯಲಿದೆ. ಈಗಾಗಲೇ ಆಗ್ನೇಯ ಕ್ಷೇತ್ರಕ್ಕೆ ಆನಂದ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆನಂದ್ ಹಾಲಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತ ಬೆಂಗಳೂರು ಶಿಕ್ಷಣ ಕ್ಷೇತ್ರಕ್ಕೆ ಪುಟ್ಟಣ್ಣ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಆ ಚುನಾವಣೆಗೆ ಯಾರನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡೋದು ಎಂಬುದರ ಕುರಿತು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಜೊತೆಗೆ ಚುನಾವಣಾ ತಯಾರಿ, ಇತ್ತೀಚೆಗೆ ಬಿಜೆಪಿಯಲ್ಲಿ ಸಂಭವಿಸಿರುವ ಭಿನ್ನಾಭಿಪ್ರಾಯಗಳು, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಆರೋಪ, ಪಕ್ಷ ಸಂಘಟನೆ, ಸರ್ಕಾರದ ಇಮೇಜ್ ಹೆಚ್ಚಳಕ್ಕೆ ಕ್ರಮ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಭೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ರಾಜ್ಯ ಸಚಿವರಾದ ಕೆ ಎಸ್ ಈಶ್ವರಪ್ಪ, ಸಿಟಿ ರವಿ ಶಾಸಕ ಸಿಎಂ ಉದಾಸಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.