ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಂದಾಯ ಸಚಿವ ಹಾಗೂ ಬೆಂಗಳೂರು ಕೋವಿಡ್-19 ಉಸ್ತುವಾರಿ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್-19 ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವ್ಯವಸ್ಥೆಯಲ್ಲಿನ ನ್ಯೂನತೆ ಹಾಗೂ ಕಳಪೆ ಆಹಾರ ಪೂರೈಕೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಸಂಸದ ತೇಜಸ್ವಿ ಸೂರ್ಯ ಪರಿಶೀಲನೆ ನಡೆಸಿದರು.
ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ನೀಡುತ್ತಿರುವ ಆಹಾರ-ನೀರು, ಹಣ್ಣು-ಹಂಪಲು, ಔಷಧಿಗಳ ಬಗ್ಗೆ ಪರೀಶಿಲನೆ ನಡಸಿದ್ದಾರೆ. ಬಳಿಕ ಅಲ್ಲಿಯೇ ಮಹಿಳಾ ಕೋವಿಡ್ ರೋಗಿ ಜೊತೆ ವಿಡಿಯೋ ಸಂವಾದ ನೆಡಸಿ ಅವರಿಗೆ ನೀಡುವ ಊಟದ ಬಗ್ಗೆ ವಿಚಾರಣೆ ನಡೆಸಿದರು. ಅಲ್ಲದೆ, ಆಸ್ಪತ್ರೆಯಲ್ಲೇ ಸೋಂಕಿತರಿಗೆ ನೀಡುವ ಊಟವನ್ನು ತರಿಸಿ, ವೈದರುಗಳ ಜೊತೆಗೂಡಿ ಸೇವಿಸಿದರು.
ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಇನ್ನಿತರೆ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರಿಗೆ ಪಂಚತಾರಾ ಹೋಟೆಲ್ನಿಂದ ಊಟ, ತಿಂಡಿ ತನಿಸುಗಳನ್ನು ತರಿಸಲಾಗುತ್ತಿದೆ. ಗುಣಮಟ್ಟದ ಯತೇಚ್ಚ ಊಟವನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಬಾದಾಮಿ ಹಾಲು, ಜ್ಯೂಸನ್ನೂ ಸೋಂಕಿತರಿಗೆ ನೀಡಲಾಗುತ್ತಿದೆ. ಜೊತೆಗೆ ಹೊಸದಾಗಿ ದಾಖಲಾಗುವವರಿಗೆ ಬಾಚಣಿಗೆ, ಟೂತ್ ಪೇಸ್ಟ್, ಸ್ಯಾನಿಟರಿ ಐಟಂಗಳನ್ನೆಲ್ಲವನ್ನೂ ನೀಡಲಾಗುತ್ತಿದೆ ಎಂದು ವಿವರಿಸಿದರು.