ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ಕೊಡುವುದು ಬೇಡವೆಂದು ಸಲಹೆ ನೀಡಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾತನಾಡಿದ ಅವರು, ನಾವು ರಾಜೀನಾಮೆ ಕೊಟ್ಟು ಮೂರು ತಿಂಗಳು ಸಾಕಷ್ಟು ನೋವು ಅನುಭವಿಸಿದ್ದೇವೆ. ರಾಜೀನಾಮೆ ಕೊಟ್ಟರೆ ರಾಜಕೀಯವಾಗಿ ಹಾಗು ಕ್ಷೇತ್ರದಲ್ಲೂ ಸಾಕಷ್ಟು ಡ್ಯಾಮೇಜ್ ಮಾಡುತ್ತಾರೆ. ಇದಕ್ಕೆಲ್ಲಾ ನೀವು ಸಿದ್ಧರಿದ್ದರೆ ಅಂಥ ಕೆಲಸಕ್ಕೆ ಕೈ ಹಾಕಿ ಎಂದರು.
ಈ ಹಿಂದೆ ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸಾಕಷ್ಟು ವಿಚಾರಗಳನ್ನು ಹರಿಬಿಟ್ಟಿದ್ದಾರೆ. ಅಣ್ಣಾ ಹಜಾರೆಯವರು ಅನರ್ಹ ಶಾಸಕರನ್ನು ಸೋಲಿಸಲು ಕರೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಇಷ್ಟಕ್ಕೂ ಅಣ್ಣಾ ಹಜಾರೆಯವರಿಗೂ ಕರ್ನಾಟಕಕ್ಕೂ ಏನು ಸಂಬಂಧ? ಎಂದರು.
ಇನ್ನು, ಕ್ಷೇತ್ರದ ಅಭಿವೃದ್ಧಿಗಷ್ಟೇ ನನ್ನ ಗಮನವಿದೆ. ನಾವೇನೂ ಮಂತ್ರಿಯಾಗೋ ಆಸೆಯಿಂದ ಬಿಜೆಪಿ ಸೇರಲಿಲ್ಲ. ಮಂತ್ರಿ ಮಾಡದೇ ಇದ್ದರೂ ಕೂಡ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ. ಮಂತ್ರಿಗಿರಿ ಕೊಡಿ ಅಂತ ಸಿಎಂ ಬಳಿ ಕೇಳಿಯೂ ಇಲ್ಲ. ಕೊಡದಿದ್ದರೂ ನಾನು ಲಾಬಿ ಮಾಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ರು.
ಡಿಕೆಶಿಗೆ ಸೋಮಶೇಖರ್ ಟಾಂಗ್:
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿಧಾನಸಭೆ ಉಪಸಮರದಲ್ಲಿ 'ನೀವೆಲ್ಲಾ ಸಮಾಧಿ ಆಗಿ ಹೋಗುತ್ತೀರಿ' ಎಂದಿದ್ದ ಮಾತಿಗೆ ಪ್ರತಿಕ್ರಿಯಿಸುತ್ತಾ, ಶಿವಕುಮಾರ್ ರಾಜ್ಯ ಮಟ್ಟದ ನಾಯಕರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.ಏನೋ ಅವರು ದೊಡ್ಡವರು ಆ ರೀತಿ ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.