ಬೆಂಗಳೂರು : ಜೂನ್ ತಿಂಗಳಿನಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ತಾತ್ಕಾಲಿಕ ಅಂಕಪಟ್ಟಿ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
1,11,781 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 46,270 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ. 41.39ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಎಸ್ಎಂಎಸ್ ಮೂಲಕವೂ ವಿದ್ಯಾರ್ಥಿಗಳಿಗೆ ಫಲಿತಾಂಶ ಕಳುಹಿಸಿಕೊಡಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಪರೀಕ್ಷೆಗೆ ಹಾಜರಾದ 71,134 ಬಾಲಕರಲ್ಲಿ 27,705 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.38 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 40,647 ಬಾಲಕಿಯರಲ್ಲಿ 18,565 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ. 45.67ರಷ್ಟು ಫಲಿತಾಂಶ ದಾಖಲಾಗಿದೆ. ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 60,026 ವಿದ್ಯಾರ್ಥಿಗಳಲ್ಲಿ 24,192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 40.30ರಷ್ಟು ಫಲಿತಾಂಶ ಬಂದರೆ, ಗ್ರಾಮಾಂತರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 51,755 ವಿದ್ಯಾರ್ಥಿಗಳಲ್ಲಿ 22,078 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.42.6 ರಷ್ಟು ಫಲಿತಾಂಶ ಬಂದಿದೆ.
44,12 ಸರ್ಕಾರಿ ಶಾಲೆಗಳ 51,941 ವಿದ್ಯಾರ್ಥಿಗಳಲ್ಲಿ 20,662 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.39.78 ರಷ್ಟು ಫಲಿತಾಂಶ ಬಂದಿದೆ. 3,154 ಅನುದಾನಿತ ಶಾಲೆಗಳ 33,213 ವಿದ್ಯಾರ್ಥಿಗಳಲ್ಲಿ 14,335 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.43.16 ರಷ್ಟು ಫಲಿತಾಂಶ ಬಂದಿದೆ. 4,248 ಅನುದಾನರಹಿತ ಶಾಲೆಗಳ 26,627 ವಿದ್ಯಾರ್ಥಿಗಳಲ್ಲಿ 11,273 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.42.34 ರಷ್ಟು ಫಲಿತಾಂಶ ದಾಖಲಾಗಿದೆ.
ಹಾಜರಾತಿ ಕೊರತೆಯಿಂದಾಗಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಲಾದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 2,446 ಅಭ್ಯರ್ಥಿಗಳಲ್ಲಿ 2,020 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 108 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಶೇ.5.35ರಷ್ಟು ಫಲಿತಾಂಶ ಪ್ರಕಟವಾಗಿದೆ.
ತಾತ್ಕಾಲಿಕ ಅಂಕಪಟ್ಟಿ ಮುದ್ರಿಸಿಕೊಳ್ಳಲು ಅವಕಾಶ: ಶಾಲೆಗಳ ಕ್ರೋಡೀಕೃತ ಫಲಿತಾಂಶ ಪಟ್ಟಿ ಹಾಗು ತಾತ್ಕಾಲಿಕ ಅಂಕಪಟ್ಟಿಯನ್ನು www.kseab.karnataka.gov.in ಜಾಲತಾಣದ ಶಾಲಾ ಲಾಗಿನ್ನಲ್ಲಿ ಇಂದಿನಿಂದಲೇ ನೀಡಲಾಗುತ್ತದೆ. ಶಾಲಾ ಹಂತದಲ್ಲಿ ಇಂದೇ ತಾತ್ಕಾಲಿಕ ಅಂಕಪಟ್ಟಿ ಮುದ್ರಿಸಿಕೊಳ್ಳಲು ಅವಕಾಶವಿದೆ.
ಜೂನ್ 12 ರಿಂದ 19 ರವರೆಗೆ ರಾಜ್ಯದ 458 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆದಿತ್ತು. 1,11,781 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದರು. ಜೂನ್ 21 ರಿಂದ 26 ರವರೆಗೆ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 51 ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಸಲಾಯಿತು. ಮೌಲ್ಯಮಾಪನ ಕಾರ್ಯದಲ್ಲಿ 9,256 ಮೌಲ್ಯಮಾಪಕರು ಪಾಲ್ಗೊಂಡಿದ್ದರು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Preparation For KEA Exams: ಕೆಇಎಯಿಂದ 670 ಹುದ್ದೆ ನೇಮಕಾತಿ; ಸರ್ಕಾರಿ ಕೆಲಸಕ್ಕೆ ಅಭ್ಯರ್ಥಿಗಳ ತಯಾರಿ ಹೀಗಿರಲಿ!