ಬೆಂಗಳೂರು: ಇದೇ ತಿಂಗಳಿನಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆ ವಿಭಾಗದ ನಿರ್ದೇಶಕ ಹೆಚ್. ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.
ಜೂನ್ 12 ರಿಂದ 19ರ ವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದ್ದು, ಶುಕ್ರವಾರ ಬೆಳಗ್ಗೆ 11 ಗಂಟೆಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. www.karresults.nic.in ಜಾಲತಾಣದಲ್ಲಿ ಪೂರಕ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ಮಂಡಳಿ ತಿಳಿಸಿದೆ.
ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳಿಗೆ ಜೂನ್ 12 ರಿಂದ ಪರೀಕ್ಷೆಗಳು ಜರುಗಿದ್ದವು. ಜೂನ್ 12ರಂದು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ , 13ರಂದು ಕೋರ್ ವಿಷಯಗಳಾದ ವಿಜ್ಞಾನ ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆ , ಜೂನ್ 14ರ ಬುಧವಾರ ದ್ವಿತೀಯ ಭಾಷೆ ಇಂಗ್ಲಿಷ್ ವಿಷಯದ ಪರೀಕ್ಷೆ, ಜೂನ್ 15ರಂದು ಕೋರ್ ವಿಷಯವಾದ ಸಮಾಜ ವಿಜ್ಞಾನ ಪರೀಕ್ಷೆ ನಡೆದಿದ್ದವು. ಜೂನ್ 16ರಂದು ಹಿಂದಿ ವಿಷಯದ ಪರೀಕ್ಷೆ, ಜೂನ್ 17ರಂದು ಕೋರ್ ವಿಷಯಗಳಾದ ಗಣಿತ ಸಮಾಜಶಾಸ್ತ್ರ ವಿಷಯದ ಪರೀಕ್ಷೆ, ಜೂನ್ 19ರಂದು ಅರ್ಥಶಾಸ್ತ್ರ ಸೇರಿದಂತೆ ಇತರ ಕೋರ್ ವಿಷಯಗಳ ಪರೀಕ್ಷೆ ನಡೆಸಲಾಗಿತ್ತು.
ಮೇ 8 ರಂದು ಈ ಬಾರಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿತ್ತು. ಈ ಬಾರಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 8,35,102 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟಾರೆ ಶೇ. 83.89 ರಷ್ಟು ಶೇಕಡಾವಾರು ಫಲಿತಾಂಶ ಬಂದಿತ್ತು. 4,25,968 ಬಾಲಕರು ಪರೀಕ್ಷೆ ಬರೆದಿದ್ದರು. ಅದರಲ್ಲಿ 3,41,108 ಬಾಲಕರು ತೇರ್ಗಡೆಯಾಗಿದ್ದರು. ಶೇಕಡಾವಾರು 80.08 ರಷ್ಟು ಬಾಲಕರು ಫಲಿತಾಂಶ ಬಂದಿತ್ತು.
4,09,134 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಅದರಲ್ಲಿ 3,59,511 ವಿದ್ಯಾರ್ಥಿನಿಯರು ತೇರ್ಗಡೆಯಾಗಿ, ಶೇ. 87.87 ರಷ್ಟು ಫಲಿತಾಂಶ ಗಳಿಸಿದ್ದರು. ಜೂನ್ 12 ರಿಂದ 19ರ ವರೆಗೆ ನಡೆದಿದ್ದ ಪೂರಕ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಎಷ್ಟು ಫಲಿತಾಂಶ ಬರಲಿದೆ ಎಂಬುದು ಶುಕ್ರವಾರ ಪ್ರಕಟವಾಗಲಿದೆ.
ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಥಣಿಯ 2 ವರ್ಷದ ಪುಟಾಣಿಯ ವಿಶೇಷ ಜ್ಞಾಪಕಶಕ್ತಿ!