ಬೆಂಗಳೂರು : ರಾಜ್ಯದಲ್ಲಿ ಎಸ್‌ಎಸ್ಎಲ್‌ಸಿ ಫಲಿತಾಂಶ ಹೊರಬಿದ್ದಿದೆ. ಪ್ರತಿ ಸಾರಿಯಂತೆ ಈ ಬಾರಿಯೂ ಹೆಣ್ಣು ಮಕ್ಕಳದ್ದೇ ಮೇಲುಗೈ. ಆನೇಕಲ್ ಖಾಸಗಿ ಶಾಲೆಯ ಸೃಜನಾ ಎಂಬ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಾದರಿಯಾಗಿದ್ದಾಳೆ.
ರಾಜ್ಯದ ಗಡಿ ತಾಲೂಕು ಆನೇಕಲ್ ಗ್ರಾಮೀಣ ಭಾಗದ ಅತ್ತಿಬೆಲೆಯ ಸೆಂಟ್ ಫಿಲೋಮಿನಾಸ್ ಪ್ರೌಢಶಾಲೆ ವಿದ್ಯಾರ್ಥಿನಿ ಸೃಜನಾ ಡಿ ಅತೀ ಹೆಚ್ಚು ಅಂಕಗಳ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಮನೆಯೆ ಮೊದಲ ಪಾಠ ಶಾಲೆಯಂತೆ ಸೃಜನಾ ತಂದೆ ದಿವಾಕರ್ ವಿಜ್ಞಾನ ವಿಷಯ ಶಿಕ್ಷಕರು. ಮಗಳ ವಿದ್ಯಾಭ್ಯಾಸಕ್ಕೆ ಸಾಥ್ ನೀಡಿದ್ದು ತಮ್ಮ ಸಹ ಶಿಕ್ಷಕರಿಗೆ, ಮಗಳಿಗೆ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದರಂತೆ.
ತಮ್ಮ ಮಗಳು ತಾಲೂಕಿಗೆ ಉತ್ತಮ ಅಂಕ ಪಡೆಯಬಹುದು ಎಂದುಕೊಂಡಿದ್ದರು ಸೃಜನಾ ತಂದೆ. ಆದರೆ, ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತಂದೆಯ ಕೀರ್ತಿ ಹೆಚ್ಚಿಸಿದ್ದು, ನಿಜಕ್ಕೂ ಹೆಮ್ಮೆಯ ವಿಷಯ.