ಬೆಂಗಳೂರು : ಇಂದು ಮತ್ತು ಜುಲೈ 22 ರಂದು ಎಸ್ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಕೋವಿಡ್ ಆತಂಕದ ನಡುವೆಯೂ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಇತ್ತ ಯಾವುದೇ ಅಡಚಣೆ ಆಗದಂತೆ ಕ್ರಮವಹಿಸಲು ಪರೀಕ್ಷಾ ಮಂಡಳಿಯೂ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರೌಢ ಶಿಕ್ಷಣ ಇಲಾಖೆ ಎಸ್ಒಪಿ ( ಮಾರ್ಗಸೂಚಿ) ಜಾರಿ ಮಾಡಿದೆ. ಪರೀಕ್ಷಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ. ಪರೀಕ್ಷಾ ಕೇಂದ್ರ, ಕೊಠಡಿಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಕೊರೊನಾ ಕಾರಣ ಆರು ದಿನಗಳ ಬದಲಿಗೆ ಈ ಬಾರಿ ಕೇವಲ ಎರಡು ದಿನಗಳಲ್ಲಿ ಪರೀಕ್ಷೆ ನಡೆಯಲಿದೆ. ಕೋರ್ ಸಬ್ಜೆಕ್ಟ್ ಹಾಗೂ ಭಾಷಾ ವಿಷಯಗಳ ಪರೀಕ್ಷೆ ಇರಲಿದೆ. ಅಬ್ಬೆಕ್ಟೀವ್ ಮಾದರಿಯಲ್ಲಿ ಒಎಂಆರ್ ಶೀಟ್‌ನಲ್ಲಿ ಪರೀಕ್ಷೆ ಬರೆಯಬೇಕಿದೆ.
ಇಂದು ಗಣಿತ, ವಿಜ್ಞಾನ, ಸಮಾಜಶಾಸ್ತ್ರ ಪರೀಕ್ಷೆ :
ಕೋರ್ ಸಬ್ಜೆಕ್ಟ್ : ಪೇಪರ್-1 ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ/ಕರ್ನಾಟಕ ಸಂಗೀತ ಪರೀಕ್ಷೆ ಇಂದು ಬೆಳಗ್ಗೆ10:30ರಿಂದ 1: 30ರವರೆಗೆ ನಡೆಯಲಿದೆ.
ಕಿರಿಯ ತಾಂತ್ರಿಕ ವಿಷಯಗಳು : ಪೇಪರ್- 319-7- 2021 ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳು ಮಧ್ಯಾಹ್ನ 2:30 ರಿಂದ 5 ರವೆಗೆ ನಡೆಯಲಿದೆ.
ಪ್ರವೇಶ ಪತ್ರ ತೋರಿಸಿದರೆ ಬಸ್‌ನಲ್ಲಿ ಉಚಿತ ಪ್ರಯಾಣ : ಪ್ರತಿ ವರ್ಷದಂತೆ ಈ ವರ್ಷವೂ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ನಾಲ್ಕು ಸಾರಿಗೆ ನಿಗಮಗಳಿಂದಲೂ ಉಚಿತ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ (ಹಾಲ್ ಟಿಕೆಟ್ ) ತೋರಿಸಿದರೆ ಉಚಿತವಾಗಿ ಸಂಚರಿಸಬಹುದಾಗಿದೆ. ವಿದ್ಯಾರ್ಥಿಗಳು ಯಾವುದೇ ಸ್ಥಳದಲ್ಲಿ ಇಳಿಯಬೇಕಾದರೂ ಬಸ್ ನಿಲ್ಲಿಸಲಾಗುತ್ತದೆ.
ಮಳೆರಾಯನ ಕಾಟ : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲು ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲ ತಿಳಿಸಿದ್ದಾರೆ.
ಅಂತಿಮ ಹಂತದ ತಯಾರಿ ಮಾಡಿಕೊಂಡಿದ್ದು, ಈ ಬಾರಿ ಹೆಚ್ಚುವರಿಯಾಗಿ 32 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 8,76,508 ಮಕ್ಕಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಪೋಷಕರು ಮಕ್ಕಳನ್ನ ಧೈರ್ಯವಾಗಿ ಕಳುಹಿಸಿ ಪರೀಕ್ಷೆ ಬರೆಯುವಂತೆ ಉತ್ತೇಜಿಸುವಂತೆ ಮನವಿ ಮಾಡಿದ್ದಾರೆ.
ವಿಶೇಷ ಕೊಠಡಿ ಸೌಲಭ್ಯ : ಕೆಮ್ಮು, ನೆಗಡಿ, ಜ್ವರ, ಮೊದಲಾದ ಅನಾರೋಗ್ಯ ಇದ್ದರೆ, ಅಂತಹ ಅಭ್ಯರ್ಥಿಗಳಿಗೆ ವಿಶೇಷ ಕೊಠಡಿ ಸೌಲಭ್ಯ ಇರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 8 :30 ರಿಂದ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ ಶುರುವಾಗಲಿದೆ. ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿಮೀಟರ್, ಮಾಸ್ಕ್ ವ್ಯವಸ್ಥೆ ಎಲ್ಲವೂ ಇರಲಿದೆ. ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಪ್ರತಿ ತಾಲೂಕಿಗೆ ಒಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡಲಾಗುತ್ತಿದೆ.
ಕೊರೊನಾ ಪಾಸಿಟಿವ್ ಅಭ್ಯರ್ಥಿಗಳಿಗೂ ಪರೀಕ್ಷೆಗೆ ಅವಕಾಶ : ಪರೀಕ್ಷಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೆ ಅಂತಹವರಿಗೆ ತಾಲೂಕಿಗೊಂದು ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿಯೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತೆ. ಕುಟುಂಬದಲ್ಲಿ ಸೋಂಕು ತಗುಲಿ ಪರೀಕ್ಷಾರ್ಥಿ ಐಸೋಲೇಷನ್‌ನಲ್ಲಿದ್ದರೆ, ಅವರೂ ಸಮೀಪದ ಸಿಸಿ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು.
ನಿಷೇಧಾಜ್ಞೆ ಜಾರಿ : ಪರೀಕ್ಷಾ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಸೆಂಟರ್ ಮುಚ್ಚಲಾಗುತ್ತದೆ. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.
ಓದಿ : ಇಂದಿನಿಂದ ಎಸ್ಸೆಸ್ಸೆಲ್ಸಿ Exam: ಪರೀಕ್ಷಾರ್ಥಿಗಳಿಗೆ ಶುಭ ಕೋರಿದ ಸಿಎಂ ಬಿಎಸ್ವೈ