ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲಿ ನಿಂತಿದ್ದ ಯುವಕನೊಂದಿಗೆ ಜಗಳ ತೆಗೆದು, ಬರ್ಬರವಾಗಿ ಹತ್ಯೆ ಮಾಡಿದ್ದ ಅಪರಾಧಿಗಳಿಗೆ ನಗರದ 57ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಯಶವಂತಪುರ ನಿವಾಸಿಗಳಾದ ಗುರಯ್ಯ ಅಲಿಯಾಸ್ ಚಿಟ್ಟಿಬಾಬು, ಜಿ. ಪ್ರವೀಣ ಹಾಗೂ ಕಿಶೋರ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು. ಮೂವರಲ್ಲಿ ಪ್ರಕರಣದ ಮೊದಲ ಆರೋಪಿ ಗುರಯ್ಯನಿಗೆ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ದಂಡ ಹಾಗೂ 25 ಸಾವಿರ ಮೃತನ ತಂದೆಗೆ ಪರಿಹಾರವಾಗಿ ನೀಡುವಂತೆ ಹಾಗೂ ಪ್ರಕರಣದ 2 ಮತ್ತು 3 ನೇ ಆರೋಪಿಗಳಾದ ಪ್ರವೀಣ ಮತ್ತು ಕಿಶೋರನಿಗೆ ತಲಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ 15 ಸಾವಿರ ದಂಡ ಪಾವತಿಸುವಂತೆ ಆದೇಶಿಸಲಾಗಿದೆ.
ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ನಗರದ 57ನೇ ಸಿಸಿಎಚ್ ನ್ಯಾಯಾಧೀಶರಾದ ಕೆ.ಜಿ ಕಾಂತಾ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಕೆ.ಎಸ್.ವೀಣಾ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ:
ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂಟರ್ನ್ ಶಿಪ್ ಮಾಡಲು ರಾಜಸ್ಥಾನದ ಜಗದೀಪ್ ಸಿಂಗ್ ಹಾಗೂ ಕೆಲ ಸ್ನೇಹಿತರು ಯಶವಂತಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. 2018ರ ಅಕ್ಟೋಬರ್ 19 ರ ರಾತ್ರಿ ನವರಂಗ್ ಬಳಿಯ ಹೋಟೆಲ್ಲೊಂದಕ್ಕೆ ಊಟಕ್ಕೆ ತೆರಳಲು ಜಗದೀಪ್ ಸಿಂಗ್ ಹಾಗೂ ಆತನ ಸ್ನೇಹಿತರು ರಸ್ತೆ ಬದಿ ನಿಂತಿದ್ದರು.
ಈ ವೇಳೆ ವಿನಕಾರಣ ಜಗಳ ತೆಗೆದಿದ್ದ ಗುರಯ್ಯ ಚಾಕುವಿನಿಂದ ಜಗದೀಪ್ ಸಿಂಗ್ ಕುತ್ತಿಗೆಗೆ ಇರಿದಿದ್ದ. ಇದೇ ವೇಳೆ ಪ್ರವೀಣ ಹಾಗೂ ಕಿಶೋರ್ ಬಿಯರ್ ಬಾಟಲ್ ಹಾಗೂ ಸಿಮೆಂಟ್ ಇಟ್ಟಿಗೆ ತುಂಡಿನಿಂದ ಹಲ್ಲೆ ಮಾಡಿದ್ದರು.
ತೀವ್ರ ರಕ್ತಸ್ರಾವವಾಗಿ ಜಗದೀಪ್ ಸಿಂಗ್ ರಾಮಯ್ಯ ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಮೃತಪಟ್ಟಿದ್ದರು. ಘಟನೆ ಸಂಬಂಧ ಜೊತೆಗಿದ್ದ ಸುಹಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ಯಶವಂತಪುರ ಠಾಣೆ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 34, 302 ಹಾಗೂ 307 ರ ಅಡಿ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಧಾರವಾಡದ SDM ಮೆಡಿಕಲ್ ಕಾಲೇಜಿನ 306 ಸೋಂಕಿತರು ಡಿಸ್ಚಾರ್ಜ್