ಬೆಂಗಳೂರು: ಈವರೆಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ನಡೆಯುತ್ತಿದ್ದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ನಡೆಯಲಿದೆ. 11,400 ವಿವಿಧ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳು ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು. ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಈ ಪರೀಕ್ಷೆಗಳು ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಇರಬೇಕೆಂಬ ಕನ್ನಡ ಪರ ಹೋರಾಟಗಾರರ ಬೇಡಿಕೆಗೆ ಈ ಮೂಲಕ ಮೊದಲ ಜಯ ಸಿಕ್ಕಂತಾಗಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್, ಹಿಂದಿ, ಕನ್ನಡ, ಕೊಂಕಣಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು ಮಲ್ಟಿಟಾಸ್ಕಿಂಗ್ ಸ್ಟಾಫ್ ಹಾಗೂ ಹವಾಲ್ದಾರಿ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಷನ್ ಬಿಡುಗಡೆ ಮಾಡಿದೆ. 10,880 ಎಂಟಿಎಸ್ ಹುದ್ದೆಗಳಿಗೆ ಹಾಗೂ 529 ಸಿಬಿಐಸಿ ಮತ್ತು ಸಿಬಿಜಿಎನ್ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಭಾಷಾ ಹೇಳಿಕೆಗೆ ಕಿಚ್ಚ ಸುದೀಪ್ ಸ್ವಾಗತ..'ಮಾತೃಭಾಷೆಗೆ ಸಿಕ್ಕ ಗೌರವ' ಎಂದ ನಟ
ಪರೀಕ್ಷಾ ಕೇಂದ್ರಗಳ ಮಾಹಿತಿ: ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಕನ್ನಡ ಭಾಷೆಯನ್ನು ಆಯ್ಕೆ ಮಾಡಲು 08 ಎಂಬ ಕೋಡ್ ಬಳಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.17. ಕಂಪ್ಯೂಟರ್ ಆಧಾರಿತ ಪರೀಕ್ಷೆ ಏಪ್ರಿಲ್ 2023ಕ್ಕೆ ನಡೆಯಲಿದೆ. ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳಿವೆ.
ಅಭ್ಯರ್ಥಿಗಳು ನಿರಾಳ: ಎಸ್ಎಸ್ಸಿಯಿಂದ ನಡೆಸುವ ಎಲ್ಲಾ ಪರೀಕ್ಷೆಗಳು ರಾಷ್ಟ್ರಮಟ್ಟದ್ದಾಗಿವೆ. ಹಿಂದಿ ಭಾಷೆಯಲ್ಲಿ ಪರೀಕ್ಷೆ ನಡೆಸುತ್ತಿದ್ದುದರಿಂದ ಬಹಳ ಸುಲಭವಾಗಿ ಹಿಂದಿ ಭಾಷಿಕರು ಈ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದರು. ರಾಜ್ಯದ ಹುದ್ದೆಗಳಿಗೆ ಸ್ಥಳೀಯ ಮೀಸಲಾತಿ ಇಲ್ಲದಿರುವುದರಿಂದ ಹೆಚ್ಚಿನ ಅಂಕ ಪಡೆದವರು ತಮಗಿಷ್ಟವಾದ ರಾಜ್ಯಗಳನ್ನು ಆಯ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಪರೀಕ್ಷೆ ಬರೆಯಲು ಅಸಮರ್ಥರಾಗುತ್ತಿದ್ದ ರಾಜ್ಯದ ಅಭ್ಯರ್ಥಿಗಳು, ಕೇಂದ್ರ ಸರ್ಕಾರದ ಹುದ್ದೆಗಳಿಂದ ವಂಚಿತರಾಗುತ್ತಿದ್ದರು. ಇದೀಗ ಕನ್ನಡದಲ್ಲೂ ಬರೆಯಬಹುದಾಗಿದ್ದು ಪರೀಕ್ಷೆಯನ್ನು ಸುಲಭವಾಗಿ ಬರೆಯಬಹುದು. ಜೊತೆಗೆ ಕೆಲಸ ಗಿಟ್ಟಿಸಿಕೊಳ್ಳಲು ಹೆಚ್ಚು ಅನುಕೂಲವಾಗಲಿದೆ.
ಇದನ್ನೂ ಓದಿ: ಬಹುಭಾಷಾ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ.. ಭಾರತದ 'ಹಿಂದಿ'ಗೂ ಸಿಕ್ತು ಸ್ಥಾನ
ಬಹುಭಾಷಾ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ: ಕಳೆದ ವರ್ಷದ ಅಂದರೆ ಜನವರಿ 11, 2022 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ (ಯುಎನ್‌ಜಿಎ) ಮೊದಲ ಬಾರಿಗೆ ಹಿಂದಿ ಭಾಷೆಯನ್ನು ಉಲ್ಲೇಖಿಸುವ ಬಹುಭಾಷಾ ಕುರಿತ ಭಾರತ ಪ್ರಾಯೋಜಿತ ನಿರ್ಣಯ ಅಂಗೀಕರಿಸಿತ್ತು. ಈ ನಿರ್ಣಯದ ಪ್ರಕಾರ ಹಿಂದಿ ಭಾಷೆ ಸೇರಿದಂತೆ ಅಧಿಕೃತ ಮತ್ತು ಅಧಿಕೃತವಲ್ಲದ ಭಾಷೆಗಳಲ್ಲಿ ಪ್ರಮುಖ ಸಂವಹನ ಮತ್ತು ಸಂದೇಶಗಳನ್ನು ಯುಎನ್ ಪ್ರಸಾರ ಮಾಡಲಿದೆ. ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಷ್ ವಿಶ್ವಸಂಸ್ಥೆಯ ಆರು ಯುನ್ ಅಧಿಕೃತ ಭಾಷೆಗಳಾಗಿವೆ. ಇಂಗ್ಲಿಷ್ ಮತ್ತು ಫ್ರೆಂಚ್ ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್‌ನ ಬಳಕೆಯ ಭಾಷೆಗಳೆಂದು ಪರಿಗಣಿಸಲ್ಪಟ್ಟಿವೆ.