ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಸಂಜೆ ವಿವಿಧ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಸಂಸದ ಶ್ರೀನಿವಾಸ ಪ್ರಸಾದ್, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಹಲವು ದಿನಗಳಿಂದ ಸಿದ್ದರಾಮಯ್ಯ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ನಾಯಕರು ಕೂಡ ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು ವಿಶೇಷವಾಗಿತ್ತು.
ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹಾಗೂ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರು, ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಬಂದಿದ್ದೆ. ಚಳಿಗಾಲದ ಅಧಿವೇಶನ ಇದ್ದ ಕಾರಣ ಕೂಡಲೇ ಬರಲು ಆಗಲಿಲ್ಲ. ಒಂದೇ ಜಿಲ್ಲೆಯವರಾದ್ದರಿಂದ ನಾವು ಆತ್ಮೀಯರು. ಬಹಳ ದಿನಗಳ ನಂತರ ಅವರನ್ನು ಭೇಟಿ ಮಾಡಿದ್ದೇನೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದೇನೆ ಎಂದರು.

ಇಂದಿರಾ ಹೆಸರೇ ಇರಲಿ:
ಇಂದಿರಾ ಕ್ಯಾಂಟೀನ್ ಬದಲಿಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಹೆಸರು ನೀಡೋ ವಿಚಾರ ಕುರಿತು ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಅವರು, ಇಂದಿರಾ ಗಾಂಧಿ ಹೆಸರಿದ್ದರೇನು ತಪ್ಪು ? ಹೀಗೆಲ್ಲಾ ಯಾಕೆ ಮಾಡ್ತಾರೋ ಗೊತ್ತಿಲ್ಲ. ಇಂದಿರಾ ಗಾಂಧಿ ಕೂಡ ರಾಷ್ಟ್ರಮಟ್ಟದ ನಾಯಕಿ ಆಗಿದ್ದವರು. ಅವರ ಹೆಸರು ಇದ್ದರೆ ತಪ್ಪೇನು? ಕ್ಯಾಂಟೀನ್ಗೆ ಇಂದಿರಾ ಹೆಸರೇ ಮುಂದುವರೆಯಲಿ ಎಂದು ಸಲಹೆ ಇತ್ತರು.