ಬೆಂಗಳೂರು: ಬಹುಕೋಟಿ ವಂಚನೆ ಎಸಗಿದ ಆರೋಪ ಹೊತ್ತಿರುವ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ಗೆ ಸಂಬಂಧಿಸಿದ 114 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನ ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಬಗ್ಗೆ ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
114.19 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದ ಇಡಿ: ಗ್ರಾಹಕರ ಹಣವನ್ನ ಕಾನೂನುಬಾಹಿರವಾಗಿ ಪಡೆದುಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಬ್ಯಾಂಕ್ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬ್ಯಾಂಕ್ನ ಸುಸ್ತಿ ಸಾಲಗಾರರಿಗೆ ಸಂಬಂಧಿಸಿದ 114.19 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ. ಜಮೀನು, ಆಸ್ತಿಪತ್ರ, ಮನೆ ವಾಣಿಜ್ಯ ಹಾಗೂ ಕೈಗಾರಿಕಾ ಕಟ್ಟಡಗಳು ಸೇರಿದಂತೆ 21 ಸ್ಥಿರಾಸ್ತಿ ಹಾಗೂ ಬ್ಯಾಂಕ್ ಹೆಸರಿನಲ್ಲಿದ್ದ 3.15 ಕೋಟಿ ನಗದು ಹಣವನ್ನ ಜಪ್ತಿ ಮಾಡಿಕೊಂಡಿದೆ. ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರಡಿ ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಐಡಿ ಹೆಗಲಿಗೆ ಗುರುರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ ಹಸ್ತಾಂತರ: ಹೆಚ್ಚಿನ ಬಡ್ಡಿ ಆಸೆ ತೋರಿಸಿ ಗ್ರಾಹಕರಿಂದ 800 ಕೋಟಿ ರೂಪಾಯಿ ವಂಚಿಸಿದ ಆರೋಪ ಹಿನ್ನೆಲೆ ಸಿಐಡಿ ಹೆಗಲಿಗೆ ಗುರುರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ ಹಸ್ತಾಂತರವಾಗುತ್ತಿದ್ದಂತೆ ಕಳೆದ ವರ್ಷ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ : ಎಲ್ಲಾ ಲಂಚ ಪ್ರಕರಣಗಳ ತನಿಖೆಗೆ ಎಸ್ಐಟಿಗೆ ವಹಿಸುವಂತೆ ಪಿಐಎಲ್.. ಶ್ರೀರಾಮ ಸೇನೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಪ್ರಕರಣದಲ್ಲಿ ಬ್ಯಾಂಕ್ ಮಾಜಿ ಆಡಳಿತ ಮಂಡಳಿ ಸದಸ್ಯರು, ಬ್ಯಾಂಕ್ ಸಿಬ್ಬಂದಿ ಹಾಗೂ ಏಜೆಂಟರನ್ನು ಸಿಐಡಿ ಬಂಧಿಸಿತ್ತು. ಅಲ್ಲದೆ ಸಂಬಂಧಪಟ್ಟ ಬ್ಯಾಂಕ್ನ ಅಧಿಕಾರಿ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಅಲ್ಲದೆ ಜಾರಿ ನಿರ್ದೇಶಾನಾಲಯ (ಇ.ಡಿ) ತನಿಖೆ ನಡೆಸಿ 45.32 ಕೋಟಿ ಮೌಲ್ಯದ ಚರಾಸ್ಥಿ ಹಾಗೂ ಸ್ಥಿರಾಸ್ತಿ ಜಪ್ತಿ ಮಾಡಿತ್ತು.
ಇದನ್ನೂ ಓದಿ : ಹಾವೇರಿಯಲ್ಲಿ ಎರಡು ಪ್ರತ್ಯೇಕ ಅಕ್ರಮ ಹಣ ಸಾಗಣೆ ಪ್ರಕರಣ; 19 ಲಕ್ಷ ರೂ. ವಶಕ್ಕೆ
ಫೈನಾನ್ಸ್ ಕಂಪನಿಗೆ ಟೋಪಿ ಹಾಕಿದ ವಂಚಕರು ಅಂದರ್: ನಕಲಿ ದಾಖಲಾತಿ ಸೃಷ್ಟಿಸಿ ಫೈನಾನ್ಸ್ ಕಂಪನಿಯಲ್ಲಿ ಲೋನ್ ಪಡೆದು ಕಾರು ಖರೀದಿಸಿ ಸಾಲ ಪಾವತಿಸದೆ ವಂಚಿಸುತ್ತಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಸೋಮವಾರ ಹೆಡೆಮುರಿ ಕಟ್ಟಿದ್ದಾರೆ. ಮಹೀಂದ್ರಾ ಫೈನಾನ್ಸ್ ಏರಿಯಾ ಮ್ಯಾನೇಜರ್ ಮೋಹನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರದೀಪ್ ಕುಮಾರ್ ಹಾಗೂ ಮನ್ಸೂರ್ ಎಂಬುವರನ್ನು ಬಂಧಿಸಿ ಆರೋಪಿಗಳಿಂದ 80 ಲಕ್ಷ ಮೌಲ್ಯದ 6 ಮಹೀಂದ್ರಾ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ : ನನ್ನ ವಿರುದ್ಧ ಬಂದಿರುವ ಭ್ರಷ್ಟಾಚಾರದ ಆರೋಪ ಶುದ್ಧ ಸುಳ್ಳು, ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಬೈರತಿ ಬಸವರಾಜ್