ಬೆಂಗಳೂರು: ಹಿಂದೆ ಬ್ಯಾಂಕುಗಳ ಮುಂದೆ ಜನರನ್ನು ನಿಲ್ಲಿಸಿದ್ದ ಕೇಂದ್ರ ಸರ್ಕಾರ ಈಗ ಆಸ್ಪತ್ರೆ ಬಾಗಿಲಲ್ಲಿ ನಿಲ್ಲಿಸಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಾಜ್ಯಾದ್ಯಂತ ಕೊರೊನಾ ವ್ಯಾಕ್ಸಿನ್ಗೆ ಹಾಹಾಕಾರವೆದ್ದಿದೆ. ಜನ ಆಸ್ಪತ್ರೆಗಳ ಮುಂದೆ ಕಾಯುವಂತಾಗಿದೆ. ವ್ಯಾಕ್ಸಿನ್ ಸ್ಟಾಕ್ ಇಲ್ಲ ಅನ್ನೋ ಕಾರಣ ನೀಡಿ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. ನೋಟ್ ಬ್ಯಾನ್ ಮಾಡಿ ದೇಶದ ಜನರನ್ನು ಬ್ಯಾಂಕ್ಗಳ ಮಂದೆ ನಿಲ್ಲಿಸಿದ್ದ ಕೇಂದ್ರ ಬಿಜೆಪಿ ಸರ್ಕಾರ ಈಗ ಆಸ್ಪತ್ರೆ ಬಾಗಿಲಲ್ಲಿ ನಿಲ್ಲಿಸುತ್ತಿದೆ. ಇದು "ನಾಳೆ ಬಾ ಸರ್ಕಾರ". ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ಜನರಿಗೆ ನಾಳೆ ಬನ್ನಿ ಎಂದು ಹೇಳಿ ಕಳುಹಿಸಲಾಗುತ್ತಿದೆ. ಮೊದಲ ಡೋಸ್ ಹಾಕಿಸಿಕೊಂಡ ಲಕ್ಷಾಂತರ ಜನ ಎರಡನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ದಿನಗಟ್ಟಲೆ ಆಸ್ಪತ್ರೆಗಳ ಮುಂದೆ ನಿಂತರೂ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ ಎಂದಿದ್ದಾರೆ.
ರಾಜ್ಯದ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ವ್ಯಾಕ್ಸಿನ್ ಖಾಲಿಯಾಗಿದೆ. ವ್ಯಾಕ್ಸಿನ್ಗಾಗಿ ಆಸ್ಪತ್ರೆಗಳ ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ವ್ಯಾಕ್ಸಿನ್ ನೀಡುವಿಕೆಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ವ್ಯಾಕ್ಸಿನ್ ಕೇಂದ್ರಗಳೇ ಸೋಂಕು ಹರಡುವ ತಾಣಗಳಾದರೂ ಆಶ್ಚರ್ಯವಿಲ್ಲ. ಮೊದಲ ಡೋಸ್ ಹಾಕಿಸಿಕೊಂಡವರು 4 ರಿಂದ 6 ವಾರಗಳಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಆದರೆ, ರಾಜ್ಯದಲ್ಲಿ ಬಹುತೇಕರಿಗೆ ಎರಡನೇ ಡೋಸ್ ವ್ಯಾಕ್ಸಿನ್ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವ್ಯಾಕ್ಸಿನ್ ಅಭಿಯಾನದ ಉದ್ದೇಶವೇ ವ್ಯರ್ಥವಾಗುತ್ತಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.
ವ್ಯಾಕ್ಸಿನ್ ಗಾಗಿ ಬೊಬ್ಬೆ:
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವ್ಯಾಕ್ಸಿನ್ ಗಾಗಿ ಬೊಬ್ಬೆ ಹೊಡೆಯಬೇಡಿ ಎಂದು ಹೇಳಿಕೆ ನೀಡಿದ್ದಾರೆ. ನಿಮ್ಮ ಸರ್ಕಾರದ ಆಡಳಿತದಲ್ಲಿ ಜನ ಜೀವ ಉಳಿಸಿಕೊಳ್ಳಲು ಒದ್ದಾಡುವಂತಾಗಿದೆ. ಆಕ್ಸಿಜನ್ ಇಲ್ಲ, ಬೆಡ್ ಇಲ್ಲ, ರೆಮ್ ಡೆಸಿವಿರ್ ಇಲ್ಲ, ಈಗ ವ್ಯಾಕ್ಸಿನ್ ಕೂಡ ಇಲ್ಲ. ಜನ ಬೊಬ್ಬೆ ಹೊಡೆಯದೇ ಇನ್ನೇನು ಮಾಡಬೇಕು.? ಕೇಂದ್ರ ಸರ್ಕಾರದಿಂದ ವ್ಯಾಕ್ಸಿನ್ ಪಾಲು ಪಡೆದುಕೊಳ್ಳದೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಕೊಡ್ತೀವಿ ಎಂದು ಘೋಷಿಸಿದ್ಯಾಕೆ.? 3 ಕೋಟಿ ಲಸಿಕೆ ಖರೀದಿಗೆ ಆರ್ಡರ್ ನೀಡಲಾಗಿದೆ ಎಂದಿರಲ್ಲ ಅದರ ಕಥೆ ಏನಾಯ್ತು. ಮುಖ್ಯಮಂತ್ರಿಗಳೇ ಜನರ ವಿರುದ್ಧ ತಿರುಗಿಬಿದ್ದು ಮಾತಾಡುವ ಬದಲು ಅವರ ಪ್ರಶ್ನೆಗಳಿಗೆ ಉತ್ತರಿಸಿ ಎಂದು ತಿಳಿಸಿದ್ದಾರೆ.