ಬೆಂಗಳೂರು: ಮನೆಯಲ್ಲಿಯೇ ಮತದಾನ ಮಾಡುವ ವಿನೂತನ ಪ್ರಯೋಗ ಕೈಗೊಂಡಿರುವ ಚುನಾವಣಾ ಆಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು 19,335 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಕಲಚೇತನ ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ.
ನೋಂದಾಯಿತ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇಬ್ಬರು ಚುನಾವಣಾಧಿಕಾರಿ, ಒಬ್ಬರು ವಿಡಿಯೋಗ್ರಾಫರ್, ಒಬ್ಬರು ಪೊಲೀಸ್ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಏಜೆಂಟ್‌ಗಳ ಉಪಸ್ಥಿತಿಯಲ್ಲಿ ಗೌಪ್ಯ ಮತದಾನ ನಡೆಯಿತು. ಮನೆಯಿಂದ ಮತದಾನ ಮಾಡಿದ ಬಳಿಕ ಯಾರಿಂದ, ಎಲ್ಲಿ, ಯಾವ ಕ್ಷೇತ್ರದಲ್ಲಿ ಮತದಾನವಾಗಿದೆ ಎಂಬುದನ್ನು ಗುರುತಿಸಿಕೊಳ್ಳಲಾಗುತ್ತಿದೆ. ಮೇ 6 ರವೆಗೆ ಮನೆಯಿಂದಲೇ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ: ಕರ್ನಾಟಕದಲ್ಲಿ ಚುನಾವಣೆಯನ್ನು 'ಪುಜಾಪುಭುತ್ವದ ಹಬ್ಬ'ದಂತೆ ಆಚರಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಮಾದರಿಯಲ್ಲಿ ಈ ಬಾರಿಯು ಸಹ ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಮಾಧ್ಯಮಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರಿಗಾಗಿ ಮತದಾನದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಲೋಕಸಭಾ ಚುನಾವಣೆ-2019ರಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ, ಛಾಯಾಚಿತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಶಂಸಿವುದರ ಜೊತೆಗೆ, ತನ್ನ ವರದಿ ಹಾಗೂ ಪುಸ್ತಕಗಳ ಮುಖಪುಟಗಳಲ್ಲಿ ಬಳಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ನಿಮಿತ್ತ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿ, ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಸೋಲಿಸಲು ಬಿಜೆಪಿ ಬಿ ಟೀಂ ನಿಂದ ಚುನಾವಣಾ ಹೊಂದಾಣಿಕೆ: ಜೈ ರಾಂ ರಮೇಶ್
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಪತ್ರಿಕಾ ಛಾಯಾಗ್ರಾಹಕರು/ಹವ್ಯಾಸಿ ಛಾಯಾಗ್ರಹಕರು ತಾವು ತೆಗೆದ ಗರಿಷ್ಠ 5 ಅತ್ಯುತ್ತಮ ಛಾಯಾಚಿತ್ರಗಳನ್ನು ಸೂಕ್ತ ಶೀರ್ಷಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡಿರುವ ಅಕ್ರಿಡಿಟೇಷನ್ ಕಾರ್ಡ್ ಅಥವಾ ತಮ್ಮ ಮಾಧ್ಯಮ ಕಚೇರಿ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಹಾಗೂ ಮನೆ ವಿಳಾಸ, ಮೋಬೈಲ್ ಸಂಖ್ಯೆ ಸೇರಿದಂತೆ ಮತ್ತಿತರ ವಿವರಗಳನ್ನು ಇ-ಮೇಲ್ ಐಡಿ: ktkceomedia2023@gmail.com ಸಲ್ಲಿಸಬಹುದು. ದಿನಾಂಕ: 20-05-2023 ರಂದು ಶನಿವಾರ ಸಂಜೆ 5 ಗಂಟೆಯೊಳಗೆ ಇ-ಮೇಲ್ ಮೂಲಕ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ.
ಬಹುಮಾನಗಳ ವಿವರ: ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ, ಸಮಾಧಾನಕರ ಬಹುಮಾನ 6 ಸಾವಿರ ರೂ. ಹಾಗೂ ವಿಶೇಷ ಬಹುಮಾನ 5 ಸಾವಿರ ರೂ. ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ದೇಶಕ್ಕೆ ಉತ್ತಮ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್.. ಬಿಜೆಪಿ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಿದೆ: ಎಂ.ಬಿ ಪಾಟೀಲ್