ಬೆಂಗಳೂರು: ವಿಶ್ವ ಯೋಗ ದಿನದ ಅಂಗವಾಗಿ ಉನ್ನತ ಶಿಕ್ಷಣ ಇಲಾಖೆಯ ವಿಜಯಿಭವ ಯುಟ್ಯೂಬ್ ಚಾನೆಲ್ ವತಿಯಿಂದ ವಿಶೇಷ ಯೋಗ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಹಾಗೂ ಯೂತ್ ಯೋಗ ಐಕಾನ್ ಮಧುಶ್ರೀ ಸಂದರ್ಶ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ, ಶಾಂತಿ, ಸಂತೋಷ ಎಂಬ ಪರಿಕಲ್ಪನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಧುಶ್ರೀ ಅವರು, ದೇಹವನ್ನು ಸಡಿಲಗೊಳಿಸುವುದು ಹಾಗೂ ಸೂರ್ಯ ನಮಸ್ಕಾರ ಮಾಡುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದರ ಜೊತೆಗೆ ತಾಡಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಭುಜಂಗಾಸನವನ್ನು ಪ್ರದರ್ಶಿಸಿ ಆದರ ಬಗ್ಗೆ ಸರಳವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಿಭವ ಯುಟ್ಯೂಬ್ ಚಾನೆಲ್ನ ರಮಣರೆಡ್ಡಿ ಅವರು, ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಯೋಗವು ಕೋವಿಡ್ನಂತಹ ಬಿಕ್ಕಟ್ಟನ್ನು ಮಾನಸಿಕ ಹಾಗೂ ದೈಹಿಕವಾಗಿ ಎದುರಿಸಲು ಪ್ರತಿಯೊಬ್ಬರಿಗೂ ಶಕ್ತಿ ನೀಡುತ್ತದೆ. ಇನ್ನು ಮುಂದೆ ನಾವೆಲ್ಲರೂ ಭಾರತೀಯ ಪರಂಪರೆಯಲ್ಲಿ ನಡೆದು ಬಂದಿರುವ ಆರೋಗ್ಯ ಪದ್ಧತಿಗಳನ್ನೇ ಅನುಸರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳೋಣ ಎಂದರು.