ಬೆಂಗಳೂರು : ಚಂದ್ರನ ಮೇಲೆ "ವಿಕ್ರಮ್ ಲ್ಯಾಂಡರ್" ಯಶಸ್ವಿಯಾಗಿ ಲ್ಯಾಂಡ್ ಆಗಲಿ ಎಂದು ನಗರದ ಬನಶಂಕರಿ ದೇವಾಲಯದಲ್ಲಿ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ ಹೆಚ್ ಬಸವರಾಜು ಹಾಗೂ ಪ್ರಧಾನ ಅರ್ಚಕ ಚಂದ್ರಮೋಹನ್ ಮತ್ತು ಅರ್ಚಕರ ವೃಂದದವರಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಚಂದ್ರಯಾನ-3 ಯಶಸ್ವಿಯಾಗಲೆಂದು ಈ ಸಂದರ್ಭದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರಾರ್ಥಿಸಲಾಯಿತು. ದೇವಾಲಯದ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜು, ಸೂಪರಿಂಟೆಂಡೆಂಟ್ ಶ್ರೀನಿವಾಸ್ ಮೂರ್ತಿ, ಆಡಳಿತ ಮಂಡಳಿಯ ಸದಸ್ಯ ವೆಂಕಟೇಶ್ ಪೂಜಾ ಕೈಂಕರ್ಯದಲ್ಲಿ ಉಪಸ್ಥಿತರಿದ್ದರು.
ರಾಕೆಟ್ ಮಾಡೆಲ್ ಹಾಗೂ ಅಮ್ಮನವರ ಹಿಂದೆ ರಾಷ್ಟ್ರಧ್ವಜ ಇಟ್ಟು ಅರ್ಚನೆ ಮಾಡಲಾಯಿತು. ಆರತಿ ಬೆಳಗಿ ಪೂಜೆ ಸಲ್ಲಿಸಿ ಚಂದ್ರಯಾನ-3 ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಹಾವೇರಿಯ ರೈತರಿಂದ ಶುಭಹಾರೈಕೆ : ಚಂದ್ರಯಾನ-03 ಯಶಸ್ವಿಗೆ ಹಾವೇರಿ ಜಿಲ್ಲೆ ರೈತ ಸಂಘದ ಸದಸ್ಯರು ಶುಭಹಾರೈಸಿದ್ದಾರೆ. ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಾಕೆಟ್ ಉಡಾವಣೆ ಚಿತ್ರ ಹಿಡಿದು ರೈತರು ಜೈಕಾರ ಹಾಕಿದರು. ವಿಜ್ಞಾನಿಗಳ ಸತತ ಪರಿಶ್ರಮ ಯಶಸ್ವಿಯಾಗಬೇಕು ಎಂದು ದೇವರಲ್ಲಿ ರೈತರು ಪ್ರಾರ್ಥನೆ ಮಾಡಿದರು. ಚಂದ್ರಯಾನ-03 ಕ್ಕೆ ಆಲ್ ದಿ ಬೆಸ್ಟ್ ಹೇಳಿದ ರೈತರು, ಅಂತಿಮ ಕ್ಷಣದ ಕಾರ್ಯಾಚರಣೆ ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಶ್ರೀಸುಬುಧೇಂದ್ರ ತೀರ್ಥರಿಂದ ಪ್ರಾರ್ಥನೆ: ದೇಶದಲ್ಲಿ ಉಡಾವಣೆಯಾಗಿರುವ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಧ್ರುವದಲ್ಲಿ ಇಂದು ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ, ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹಾರೈಸಿದ್ದಾರೆ.
ರಾಯರ ಮೂಲಬೃಂದಾವನದಲ್ಲಿ ಪೂಜೆ: ಈ ಬಗ್ಗೆ ಮಾತನಾಡಿದ ಅವರು, ಚರಿತ್ರೆಯ ಒಂದು ವಿಶಿಷ್ಠವಾದ ದಿನ. ನಮ್ಮ ಭಾರತೀಯ ವಿಜ್ಞಾನಿಗಳು ಅದೆಷ್ಟೋ ಪರಿಶೋಧನೆಯನ್ನು ಮಾಡುವ ಮೂಲಕ ಅನೇಕ ಮೈಲುಗಲ್ಲನ್ನು ಸಾಧಿಸಿದ್ದಾರೆ. ವೇದ, ಪುರಾಣಗಳ ಕಾಲದಿಂದಲೂ ದೇಶ ವೈಜ್ಞಾನಿಕವಾಗಿರುವಂತದ್ದು, ನಮ್ಮ ಸನಾತನ ವೈದಿಕ ಸಂಪತ್ತು ವಿಜ್ಞಾನಭರಿತವಾಗಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿದಾನದಲ್ಲಿ ಚಂದ್ರಯಾನ ಯಶಸ್ವಿಗಾಗಿ ಮೂಲರಾಮ ದೇವರು, ರಾಯರ ಮೂಲಬೃಂದಾವನದಲ್ಲಿ ವಿಶೇಷವಾಗಿ ಪೂಜೆ, ಕೈಂಕರ್ಯಗಳನ್ನು ನೆರವೇರಿಸಲಾಯಿತು ಎಂದು ತಿಳಿಸಿದರು.
ಅವಿರತ ಶ್ರಮದಿಂದ ನಮ್ಮ ದೇಶದ ಇಸ್ರೋ ಕೇಂದ್ರ ವಿಜ್ಞಾನಿಗಳು ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ. ಚಂದ್ರನ ಕಕ್ಷೆಗೆ ತಲುಪಿದ ವಿಕ್ರಮ್ ಲ್ಯಾಂಡರ್ ಇಂದು ಚಂದ್ರನ ಮೇಲೆ ಭೂ ಸ್ಪರ್ಶ ಮಾಡಲಿದ್ದು, ಆ ಮಹತ್ವದ ಘಟ್ಟವನ್ನು ವಿಜ್ಞಾನಿಗಳು ಯಶಸ್ವಿಯಾಗಿ ನೆರವೇರಿಸಲಿ. ಇದಕ್ಕಾಗಿ ವಿಶೇಷ ಪೂಜೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಕಾರ್ಯಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಬೃಹತ್ ರಂಗೋಲಿಯಲ್ಲಿ ಮೂಡಿಬಂದ ಚಂದ್ರಯಾನಾ-3: ಇನ್ನೊಂದೆಡೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಚಂದ್ರಯಾನಾ-3 ಯಶಸ್ವಿಯಾಗಲಿ ಎಂದು ಹಾರೈಸಿ ಇಲ್ಲಿನ ಲಿಟಲ್ ಹಾರ್ಟ್ ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬೃಹತ್ ಆಕಾರದ ರಂಗೋಲಿ ಬಿಡಿಸಿ ಗಮನ ಸೆಳೆದರು. 30 ಅಡಿ ಉದ್ದ, 30 ಅಡಿ ಅಗಲದ ವಿಶಾಲ ರಂಗೋಲಿಯಲ್ಲಿ ಚಂದ್ರಯಾನ-3ರ ಆಕೃತಿ ರಚಿಸಲಾಗಿತ್ತು. ಕೆಳಗೆ ಭಾರತದ ತ್ರಿವರ್ಣ ಬಿಡಿಸಲಾಗಿದ್ದು, ರಾಕೆಟ್ ಮಾದರಿಯ ಆಕೃತಿ ಚಂದ್ರನನ್ನು ಸ್ಪರ್ಶಿಸುವ ಕಲಾಕೃತಿ ರಚಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ, ಇಸ್ರೋದ ಮಹತ್ವದ ಯೋಜನೆಯಾದ ಚಂದ್ರಯಾನ-3 ಮೂಲಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಚಂದ್ರಯಾನ-3 ಯಶಸ್ವಿಗೊಳ್ಳಲಿ ಎಂದು ಶಾಲೆಯ ಸಾವಿರಾರು ಮಕ್ಕಳು ಸಾಮೂಹಿಕವಾಗಿ ಶುಭ ಹಾರೈಸಿದ್ದಾರೆ ಎಂದರು.
ಇದನ್ನೂ ಓದಿ: ಚಂದ್ರಯಾನ-3: ಶಿವಮೊಗ್ಗದ ದೇವಾಲಯ, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ; ಶಾಲಾ ಮಕ್ಕಳಿಂದ ಶುಭ ಹಾರೈಕೆ